ತುಮಕೂರು:ಹಂಪಿ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೆ, ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ನೀಡಲು ಹಣವಿದೆ. ಆಳುವವರೇ ಈ ರೀತಿ ನಡೆದುಕೊಂಡರೆ ಹೇಗೆ?, ಇದು ರಾಜ್ಯದ ದುರಂತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ .ರಾಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕು. ಕನ್ನಡಿಗರ ಹಾಗೂ ಕನ್ನಡದ ಸಮಸ್ಯೆಗೆ, ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕಾರ್ಯ ನಿರ್ವಹಿಸಬೇಕು. ಕನ್ನಡಿಗರ ಪ್ರಾತಿನಿಧ್ಯವನ್ನಾಗಿ ಬೆಳೆಸುವ ಕಾರ್ಯ ಮಾಡಲು ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ ರಾಮೇಗೌಡ ಚುನಾವಣೆಯ ನಂತರ ರಾಜ್ಯಾಧ್ಯಕ್ಷ ಸ್ಥಾನ ಪಡೆದರೆ, ಮೊದಲಿಗೆ ಗ್ರಾಮಮಟ್ಟದಿಂದ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಲು ಶ್ರಮಿಸುವೆ. ಗ್ರಾ. ಪಂಚಾಯಿತಿ ಮಟ್ಟದಲ್ಲಿ ಉಚಿತ ಗ್ರಂಥಾಲಯ ನಿರ್ಮಿಸಲಾಗುವುದು, ಜನಪದ ನಶಿಸುತ್ತಿರುವ ಈ ಸಂದರ್ಭದಲ್ಲಿ ಯುವಕರಿಗೆ ಜನಪದ ಕಲೆವನ್ನು ಕಲಿಸುವ ಮೂಲಕ ಉಳಿಸುವ ಕಾರ್ಯ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ 6 ತಿಂಗಳಿಗೊಮ್ಮೆ ಪುಸ್ತಕಗಳ ಮಹಾಮೇಳ ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬಗ್ಗೆ ಮಾತನಾಡಿದ ಅವರು, ಬೆಳಗಾವಿ ಗಡಿಯ ಪುಂಡ-ಪೋಕರಿಗಳಿಗೆ ಈ ಪ್ರಾಧಿಕಾರದಿಂದ ಉತ್ತೇಜನ ನೀಡಿದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ರಾಧಿಕಾರ ವಿರೋಧಿಸಿದ್ದೇವೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ಏಕೆ ವಿರೋಧಿಸಲಿಲ್ಲ ಎಂಬುದನ್ನು ನಾವು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ ಎಂದರು.