ತುಮಕೂರು:ರೈತ ದೇಶದ ಬೆನ್ನೆಲುಬು. ಆದರೆ ಜಿಲ್ಲೆಯ ಬರೋಬ್ಬರಿ 2 ಲಕ್ಷ ರೈತರು ಹಕ್ಕುಪತ್ರ ಪಡೆಯಲು ಕಾಯುತ್ತಿದ್ದು, ಬಗರ್ ಹುಕುಂ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರದ ವಿಳಂಬ ಧೋರಣೆಯಿಂದ ಅನ್ಯಾಯವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಮೂವತ್ತು ವರ್ಷಗಳಿಂದ ಅರ್ಜಿ ಹಾಕಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ ಮೂರು ಹಂತದಲ್ಲಿ ಫಾರಂ ನಂ. 50, 53, 57ರಲ್ಲಿ ಅರ್ಜಿ ಸಲ್ಲಿಸಲು ಹೇಳಿತ್ತು. ಈ ಮೂರು ಹಂತಗಳು ಸೇರಿ ಒಟ್ಟು 2,72,245 ರೈತರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕೇವಲ 67,266 ರೈತರಿಗೆ ಅರ್ಜಿ ಮಂಜೂರಾಗಿ ಭೂಮಿ ಸಿಕ್ಕಿದೆ. ಉಳಿದ 2,04,979 ರೈತರಿಗೆ ಭೂಮಿಯ ಹಕ್ಕು ದೊರೆತಿಲ್ಲ.
2 ಲಕ್ಷ ರೈತರಲ್ಲಿ 90 ಸಾವಿರ ಅರ್ಜಿಗಳನ್ನ ಜಿಲ್ಲಾಡಳಿತ ವಿವಿಧ ಕಾರಣ ನೀಡಿ ತಿರಸ್ಕರಿಸಿದೆ. ಬರೋಬ್ಬರಿ 1 ಲಕ್ಷದ 10 ಸಾವಿರ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದೆ. ತಿರಸ್ಕರಿಸಲು ಅನೇಕ ಕಾರಣಗಳನ್ನ ನೀಡಿದ್ದು, ಇರುವ ಅರ್ಜಿಗಳನ್ನ ಇತ್ಯರ್ಥಪಡಿಸಲು ಮೀನಾಮೇಷ ಎಣಿಸುತ್ತಿದೆ. ಶಾಸಕರ ನೇತೃತ್ವದ ಸಮಿತಿ ರಚನೆಯಾಗಬೇಕು. ಆದರೆ ರಚನೆಯೇ ಆಗಿಲ್ಲ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.