ತುಮಕೂರು: ವರಮಹಾಲಕ್ಷ್ಮೀ ಹಬ್ಬ ಅಂದಾಕ್ಷಣ ಭಕ್ತರಿಗೆ ನೆನಪಿಗೆ ಬರೋದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ. ಲಕ್ಷ್ಮಿ ಕೃಪಾಕಟಾಕ್ಷಕ್ಕಾಗಿ ಸಾವಿರಾರು ಭಕ್ತರು ಪ್ರತಿ ವರ್ಷ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಹಬ್ಬದಂದು ರಾಜ್ಯವಲ್ಲದೆ ಹೊರ ರಾಜ್ಯದ ಆಂಧ್ರ, ತಮಿಳುನಾಡಿನಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಮಹಾಲಕ್ಷ್ಮಿ ಹೋಮ, ಹವನ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ 6.30ರಿಂದ 8.30ವರೆಗೆ ಪಂಚಾಮೃತ ಅಭಿಷೇಕ ಮಾಡಲಾಗುವುದು. ಬೆಳಗ್ಗೆ 9ರಿಂದ 11ರವರೆಗೆ ಶ್ರೀ ಮಹಾಲಕ್ಷ್ಮಿ ಹೋಮ ಆಯೋಜಿಸಲಾಗಿದೆ. ನಂತರ ಮಹಾಲಕ್ಷ್ಮಿ ಮೂರ್ತಿಗೆ ಅಭಿಷೇಕ, ಅಷ್ಟೋತ್ತರ ಸಹಸ್ರ ಪೂಜೆಗಳು, ಅಷ್ಟಾವಧಾನ ವ್ಯವಸ್ಥೆ ಮಾಡಲಾಗಿದೆ.