ತುಮಕೂರು: ಆಡಳಿತ ಮಂಡಳಿಯಲ್ಲಿನ ಅನೇಕ ವಿವಾದದಿಂದಾಗಿ ಆರು ವರ್ಷಗಳ ಹಿಂದೆ ಸರ್ಕಾರದ ಹಿಡಿತಕ್ಕೆ ಒಳಪಟ್ಟಿದ್ದ ಗೋರವನಹಳ್ಳಿ ವರಮಹಾಲಕ್ಷ್ಮಿ ದೇವಾಲಯವನ್ನು ಇದೀಗ ನ್ಯಾಯಾಲಯದ ಆದೇಶದಂತೆ ಟ್ರಸ್ಟಿಗೆ ವಹಿಸಲಾಗಿದೆ.
ರಾಜ್ಯದ ಪ್ರಸಿದ್ದ ಲಕ್ಷ್ಮಿ ದೇವಾಲಯಕ್ಕೆ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಈ ದೇವಾಲಯ ಆರು ವರ್ಷಗಳ ಹಿಂದೆ ಮಧುಗಿರಿ ಉಪವಿಭಾಗಾಧಿಕಾರಿ ಆಡಳಿತಕ್ಕೆ ಒಳಪಟ್ಟಿತ್ತು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದ ಆಡಳಿತವನ್ನು ಹೈಕೋರ್ಟ್ ನ ಆದೇಶದ ಮೇರೆಗೆ ಇದೀಗ ಮತ್ತೆ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.
ಈ ಹಿಂದೆ ದೇವಾಲಯದ ಟ್ರಸ್ಟ್ನ ಸುಪರ್ದಿಯಲ್ಲಿತ್ತು. 2015ರ ಮಾರ್ಚ್‌ನಲ್ಲಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನಲ್ಲಿ ಉಂಟಾದ ವಿವಾದದಿಂದಾಗಿ ತಹಶೀಲ್ದಾರ್ ವರದಿ ಆಧಾರದಲ್ಲಿ ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆಗೆ ವಹಿಸಿಕೊಂಡಿತ್ತು. ಬಳಿಕ ಇದರ ಜವಾಬ್ದಾರಿಯನ್ನು ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿತ್ತು. ನಂತರ ಅದೇ ಉಪವಿಭಾಗಾಧಿಕಾರಿಯನ್ನು ಈ ದೇವಾಲಯದ ಆಡಳಿತ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಸತತ ಆರು ವರ್ಷಗಳ ಬಳಿಕ ಈ ದೇವಾಲಯವನ್ನು ಮತ್ತೆ ಮಹಾಲಕ್ಷ್ಮಿ ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.