ತುಮಕೂರು :ಇಲ್ಲಿನ ಪುರಾಣ ಪ್ರಸಿದ್ದ ಗೂಳೂರು ಗಣಪತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಗೂಳೂರಿನ ಗಣೇಶ ಎಷ್ಟು ಪ್ರಸಿದ್ದವೋ ಅಷ್ಟೇ ಪ್ರಸಿದ್ದಿಯನ್ನು ಗೂಳೂರು ಕೆರೆ ಸಹ ಪಡೆದುಕೊಂಡಿದೆ. ಇದೀಗ ಅಂತಹ ಕೆರೆ ತನ್ನ ಕುರುಹು ಕಳೆದುಕೊಳ್ಳುತ್ತಿದೆ. ಕೆರೆ ಉಳಿವಿಗೆ ಯುವಕರ ತಂಡವೊಂದು ಟೊಂಕ ಕಟ್ಟಿ ನಿಂತಿದೆ.
ಕೆರೆಯ ಸುತ್ತಲಿನ ಜಮೀನು ಮಾಲೀಕರು ಹಾಗೂ ರಾಜಕೀಯ ಧುರೀಣರ ಹಿಂಬಾಲಕರು ಕೆರೆಯನ್ನು ಒತ್ತುವರಿ ಮಾಡಿ ಉಳುಮೆ ಮಾಡಿಕೊಳ್ಳುತ್ತಿದ್ದಾರೆ. ಗೂಳೂರು ಕೆರೆಯಿಂದ ಗೂಳೂರು, ಗೂಳರಿವೆ, ಸಂಕಾಪುರ, ಪಾಲ್ ಸಂದ್ರ ಪಾಳ್ಯ, ಕಿತ್ತಗನಹಳ್ಳಿ, ಏರಿ ಇಂದು ಪಾಳ್ಯ ಹಾಗೂ ಮೂಡಲು ಕೊಡಿಪಾಳ್ಯ ಜನರು ಈ ಕೆರೆಯ ನೀರನ್ನು ಅವಲಂಬಿಸಿದ್ದಾರೆ. ಸದ್ಯ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಬರುವ ಗೂಳೂರು ಕೆರೆ ಸುಮಾರು 272.80 ಹೆಕ್ಟೇರ್ ಪ್ರದೇಶದಷ್ಟು ವಿಸ್ತಾರವಾಗಿದೆ. ಇದರಲ್ಲಿ 100 ಹೆಕ್ಟೇರ್ ಪ್ರದೇಶ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗೂಳೂರು ಕೆರೆ 101.58 ಚದರ ಕಿ. ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. 100.60 ಎಂಸಿಎಫ್‌ಟಿ ನೀರು ಸಂಗ್ರಹಣ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚಿನ ಹಲವು ವರ್ಷಗಳಿಂದ ದಿನೇದಿನೆ ತನ್ನ ಜಲಾವೃತ ಪ್ರದೇಶವನ್ನು ಕಳೆದುಕೊಳ್ಳುತ್ತಾ ಬಂದಿದೆ. ಅಂದರೆ ಸುತ್ತಮುತ್ತಲ ಹಲವು ಗ್ರಾಮಗಳ ಗ್ರಾಮಸ್ಥರೇ ಇದನ್ನು ಕಬಳಿಸುತ್ತಿದ್ದು, ಇನ್ನು ಕೆರೆಗೆ ನೀರು ಹರಿದು ಬರುವ ಹಳ್ಳಗಳು ಹಾಗೂ ತೊರೆಗಳನ್ನ ನಾಶಪಡಿಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.