ತುಮಕೂರು: ದೇಶದಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ, ಆದರೆ ಕೇಂದ್ರ ಸರ್ಕಾರ ಮಾತ್ರ ಶೇ.5ರಲ್ಲಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ; ದಿನೇಶ್ ಗುಂಡೂರಾವ್ ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿ ಅವರು, ಜಿಡಿಪಿ ಪ್ರತಿದಿನ ಕುಸಿತವಾಗುತ್ತಿದ್ದು, ಜಿಡಿಪಿ ಲೆಕ್ಕ ಹಾಕುವಂತಹ ಪ್ರಕ್ರಿಯೆಗಳನ್ನು ಕೂಡ ಬದಲಾಯಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಕೊಡುವಂತಹ ಲೆಕ್ಕಾಚಾರಗಳು ಕೂಡ ನಂಬಿಕೆ ಇಲ್ಲದಂತಾಗಿದೆ ಎಂದರು.
ಸರ್ಕಾರದ ಯಾವ ಸಂಸ್ಥೆಗಳನ್ನು ಬಿಡದೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ಸ್ವಾಯತ್ತತೆ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಬಿಐ ಮತ್ತು ಇಡಿಯನ್ನು ಬಿಜೆಪಿ ಪಕ್ಷದ ಘಟಕದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು,ಹೊಸದಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ರೈತರ ಕುರಿತು ಯಾವುದೇ ಕಾಳಜಿ ಮತ್ತು ಚರ್ಚೆ ಮಾಡದ ಕೇಂದ್ರ ಸರ್ಕಾರ ಕೇವಲ ಆರ್ಟಿಕಲ್ 370 ಮತ್ತು ಅಸ್ಸೋಂನ ಸಿಟಿಜನ್ ಬಿಲ್ ಅಲ್ಲದೆ ದ್ವೇಷದ ರಾಜಕಾರಣದ ಮೂಲಕ ಮುಖಂಡರನ್ನು ಜೈಲಿಗೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದರು.