ತುಮಕೂರು : ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕ್ರೀಡಾಂಗಣದಲ್ಲಿ ಸುಮಾರು 800 ಕ್ರೀಡಾಪಟುಗಳು ವಾಸ್ತವ್ಯ ಹೂಡಲು ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಲು ಕ್ರೀಡಾಂಗಣ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಕ್ರೀಡಾಂಗಣ ನಿರ್ಮಾಣ ಕುರಿತಂತೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿರುವುದು.. ಕ್ರೀಡಾಂಗಣಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವನೆಯನ್ನು ನಾನು ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯ ಸರಕಾರದ ಮುಂದೆ ಇಡಲಾಗಿತ್ತು.
ಅದೇ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಈ ವೇಳೆ 52 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕ್ರೀಡಾಂಗಣವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗುತ್ತಿದೆ ಎಂದರು.
ಕರ್ನಾಟಕದಲ್ಲೇ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣವಾಗಲಿದೆ. ಫುಟ್‌ಬಾಲ್ ಸೇರಿದಂತೆ ನಾನಾ ಕ್ರೀಡೆಗಳಿಗೆ ಈ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಈ ಕ್ರೀಡಾಂಗಣ ಸಹಕಾರಿಯಾಗಲಿದೆ.
ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ತ್ರೀಸ್ಟಾರ್ ಹೋಟೆಲ್ ನಿರ್ಮಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಿದ್ದೇವೆ. ಸುಮಾರು 2 ಸಾವಿರ ಕೋಟಿ ಹೂಡಿಕೆಯ ಪ್ರಸ್ತಾವನೆ ಇದಾಗಿದೆ. ಸರ್ಕಾರ ಈ ಪ್ರಸ್ತಾವನೆಗೆ ಅನುಮತಿ ನೀಡಿಲ್ಲ ಎಂದರು.