ತುಮಕೂರು :ತುಮಕೂರು, ರಾಮನಗರ, ಹಾಸನ, ಬೆಂಗಳೂರು ಜಿಲ್ಲೆಯಲ್ಲಿ ಬೆಡ್ ಸಿಗದ ಬಡ ಕೊರೊನಾ ಸೋಂಕಿತರಿಗೆ ಜೀವದಾನ ನೀಡುವ ತಿಪಟೂರಿನ ಖಾಸಗಿ ಆಸ್ಪತ್ರೆಯೊಂದನ್ನು ಜನ ಹುಡುಕಿಕೊಂಡು ಬರುತ್ತಿದ್ದಾರೆ.
ತಿಪಟೂರು ನಗರದಲ್ಲಿರುವ ‘ಕುಮಾರ್ ಆಸ್ಪತ್ರೆ’ಯಲ್ಲಿ ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸೇವೆ, ಆಕ್ಸಿಜನ್, ಔಷಧಿಗಳು, ಊಟ, ವಸತಿ ಎಲ್ಲವೂ ಉಚಿತವಾಗಿದೆ.
ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀಧರ್ ಬಡ ಕೊರೊನಾ ಸೋಂಕಿತರಿಗೆ ದೇವರಂತೆ ಬಿಂಬಿತರಾಗಿದ್ದಾರೆ. ಡಾ.ಶ್ರೀಧರ್ ತಮ್ಮ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು 76 ಬೆಡ್ಗಳ ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿ ದಾಖಲಾಗುವ ರೋಗಿಗಳಿಗೆ ಮತ್ತು ಅವರ ಜೊತೆ ಬರುವ ಸಂಬಂಧಿಕರಿಗೂ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ನರ್ಸಿಂಗ್ ಸೇವೆ, ಆಕ್ಸಿಜನ್ಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಕೆಲವು ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ 46 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಜಿಲ್ಲೆಯ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಅರಸೀಕೆರೆ ತಾಲೂಕಿನಿಂದಲೂ ಹೆಚ್ಚು ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಮುಖ್ಯವಾಗಿ ಆಕ್ಸಿಜನ್ ಕೊರತೆ ಬರಲಿದೆ ಎಂಬ ವಿಷಯ ಅರಿತಿದ್ದ ಡಾ. ಶ್ರೀಧರ್, 60 ಸಿಲಿಂಡರ್ಗಳನ್ನು ಮೀಸಲಾಗಿರಿಸಿಕೊಂಡಿದ್ದರು.