ತುಮಕೂರು: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಎಂಬುವರು ತಮ್ಮ ಪತ್ನಿಯೊಂದಿಗೆ ಸೇರಿ ನೂರಾರು ಜನರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2019ರಲ್ಲಿ ಪೊಲೀಸ್ ಇಲಾಖೆಯಿಂದ ಇವರು ವಜಾಗೊಂಡಿದ್ದರು.
ಅನೇಕ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಯುವಜನರನ್ನು ನಂಬಿಸಿ ಲಕ್ಷಾಂತರ ರೂ. ಗಳನ್ನು ಪಡೆದು ಮಹೇಶ್ ವಂಚಿಸಿದ್ದರು. 150 ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಮಹೇಶ್ ಅವರ ಮೇಲಿದೆ. ಕನಿಷ್ಠ ಒಬ್ಬೊಬ್ಬರಿಂದ 2 ರಿಂದ 5ಲಕ್ಷ ರೂ. ವರೆಗೂ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗ್ತಿದೆ. ಮಹೇಶ್ ಈ ಹಿಂದೆ ತಿಪಟೂರು, ಪಾವಗಡ, ಕೊರಟಗೆರೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿದ್ದರಂತೆ. ಅಲ್ಲದೆ ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ ಟೇಬಲ್ ಆಗಿ ಕೆಲಸ ಮಾಡಿದ್ದಾರೆ.
ದುರ್ವರ್ತನೆ ತೋರಿದ ಹಿನ್ನೆಲೆ 2019 ರಲ್ಲಿಯೇ ಕೆಲಸದಿಂದ ಇವರನ್ನು ವಜಾಗೊಳಿಸಲಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಇದ್ದಾಗ ಬ್ಯಾಂಕ್ಗಳಲ್ಲಿ ಸಾಲ ಕೊಡಿಸುವುದಾಗಿ ಜನರನ್ನು ವಂಚಿಸಿದ್ದರು. ಕೆಲಸ ಕಳೆದುಕೊಂಡ ನಂತರ ಇದೇ ರೀತಿಯ ವಂಚನೆಯನ್ನೂ ಮುಂದುವರೆಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಇನ್ನೊಂದೆಡೆ ಮಹೇಶ್ ಪತ್ನಿ ಸುಧಾ ಸಹ ಮಹಿಳೆಯರಿಗೆ ವಂಚಿಸುವುದನ್ನು ಕರಗತ ಮಾಡಿಕೊಂಡಿದ್ದರಂತೆ. 150ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಪೀಕಿದ್ದಾರೆ ಎನ್ನಲಾಗ್ತಿದೆ.
ಒಂದೇ ಮನೆ ಮೂವರಿಗೆ ಬಾಡಿಗೆ: ಮಹೇಶ್ ತಾವು ವಾಸವಿದ್ದ ಜಯನಗರ ಮನೆಯನ್ನು ಮೂವರಿಗೆ ಲೀಸ್ ಮಾಡಿಕೊಟ್ಟಿರುವುದು ಅಚ್ಚರಿ ಮೂಡಿಸಿದೆ. ಮುಂದಿನ ತಿಂಗಳು ತಾನು ಬೇರೆ ಮನೆಗೆ ಶಿಫ್ಟ್ ಆಗುತ್ತೇನೆ ಎಂದು ನಂಬಿಸಿ ಮೂವರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ. ಮೂರು ತಿಂಗಳಲ್ಲಿ ಖಾಲಿ ಮಾಡುವೆ ಎಂದೇಳಿ ಒಬ್ಬರಿಂದ 5 ಲಕ್ಷ ರೂ.,15 ದಿನದಲ್ಲಿ ಖಾಲಿ ಮಾಡುತ್ತೇನೆ ಎಂದು ಮತ್ತೊಬ್ಬರಿಂದ 7ಲಕ್ಷ ರೂ., ಮೂರು ದಿನದಲ್ಲಿ ಖಾಲಿ ಮಾಡುತ್ತೇನೆ ಎಂದು ಹೇಳಿ ಮಗದೊಬ್ಬರಿಂದ 9 ಲಕ್ಷ ರೂ. ಹಣ ಪಡೆದು ಪಂಗನಾಮ ಹಾಕಿದ್ದಾರೆ ಎಂದು ಹೇಳಲಾಗ್ತಿದೆ. ಈಗ ಮನೆ ಬಿಟ್ಟು ಪರಾರಿಯಾಗಿದ್ದು, ಹಣ ಕೊಟ್ಟವರು ತಬ್ಬಿಬ್ಬಾಗಿದ್ದಾರೆ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್, ಅಮಾನತುಗೊಂಡಿರುವ ಪೊಲೀಸ್ ಪೇದೆ ಮಹೇಶ್ ಅವರಿಂದ ವಂಚನೆಗೆ ಒಳಗಾಗಿರುವರು ಇದ್ದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾಲದ ಆ್ಯಪ್ ಕಿರುಕುಳ : ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ