ತುಮಕೂರು:ಜಿಲ್ಲೆಯಲ್ಲಿ ಇಂದು ನಾಲ್ವರಲ್ಲಿ ಕೊರೊನಾ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಕಂಡು ಬಂದಿರುವ ಟಿಎಂಕೆ 42 ಸೋಂಕಿತ ವ್ಯಕ್ತಿಯಾಗಿದ್ದು, ನೆಲಮಂಗಲ ತಾಲೂಕಿನ ಸೋಂಕಿತ ಮಹಿಳೆಯಿಂದ ಇವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ತಿಪಟೂರು ನಗರದ ಮಹಿಳೆಯೊಬ್ಬರಲ್ಲಿ ಸೋಂಕು ದೃಢವಾಗಿದ್ದು, ಅವರನ್ನು ಟಿಎಂಕೆ 48 ಎಂದು ಗುರುತಿಸಲಾಗಿದೆ. ಈ ಮಹಿಳೆಯು ತಮಿಳುನಾಡಿಗೆ ಹೋಗಿ ವಾಪಸ್ ತಿಪಟೂರು ನಗರಕ್ಕೆ ಬಂದಿದ್ದರು.
ತಾಲೂಕಿನ ವ್ಯಾಪ್ತಿಯಲ್ಲಿ ಮತ್ತೊಬ್ಬರಲ್ಲಿ ಸೋಂಕು ಕಂಡು ಬಂದಿದ್ದು, ಅವರನ್ನು ಟಿಎಂಕೆ 49 ಎಂದು ಗುರುತಿಸಲಾಗಿದೆ. ಅವರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಇನ್ನು ನಗರಕ್ಕೆ ಬಂದಿದ್ದ 25 ವರ್ಷದ ಯುವಕನಲ್ಲಿ ಸೋಂಕು ಕಂಡು ಬಂದಿದ್ದು, ಈತ ವಿದೇಶದಿಂದ ವಾಪಸ್ ಆಗಿದ್ದ. ಅವರನ್ನು ಟಿಎಂಕೆ 50 ಎಂದು ಗುರುತಿಸಲಾಗಿದ್ದು, ವಾಸ ಮಾಡುತ್ತಿರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 17 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 29 ಮಂದಿಯನ್ನು ಕೊರೊನಾ ಶಂಕಿತ ವ್ಯಕ್ತಿಗಳೆಂದು ಪರಿಗಣಿಸಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಇದುವರೆಗೆ 13,958 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 12,884 ಮಂದಿಯಲ್ಲಿ ನೆಗೆಟಿವ್ ವರದಿ ಬಂದಿದೆ.
ಇಂದು ಒಂದೇ ದಿನ 354 ಮಂದಿಯ ಗಂಟಲು ದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದ್ದು, 835 ಮಂದಿಯ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ.