ಕರ್ನಾಟಕ

karnataka

By

Published : Jun 27, 2021, 2:27 PM IST

ETV Bharat / state

ತುಮಕೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ: ಒಂದೇ ದಿನ ನಾಲ್ಕು ಪ್ರಕರಣ ದಾಖಲು

ಸೈಬರ್ ವಂಚಕರ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರು, ಜನ ಮಾತ್ರ ಬದಲಾಗ್ತಿಲ್ಲ. ಯಾರೋ ಅಪರಿಚಿತರಿಗೆ ಎಲ್ಲಾ ಖಾಸಗಿ ಮಾಹಿತಿಗಳನ್ನು ನೀಡಿ ಮೋಸ ಹೋಗುತ್ತಿದ್ದಾರೆ. ತುಮಕೂರಿನಲ್ಲಿ ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ.

Cyber crime increasing in Tumku
ತುಮಕೂರು ಸೈಬರ್ ಅಪರಾಧ

ತುಮಕೂರು :ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಜೂನ್ 25ರಂದು ಒಂದೇ ದಿನ ನಾಲ್ಕು ಸೈಬರ್ ಕ್ರೈಂ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

2.31 ಲಕ್ಷ ಲಪಟಾಯಿಸಿದ ಖದೀಮರು : ಮೊದಲ ಪ್ರಕರಣದಲ್ಲಿ,ತುಮಕೂರಿನ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 2,31,988 ರೂ. ಹಣವನ್ನು ಖದೀಮರು ಲಪಟಾಯಿಸಿದ್ದಾರೆ. ಭಾರತೀಯ ಸ್ವೇಟ್​ ಬ್ಯಾಂಕ್ (ಎಸ್​ಬಿಐ) ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯ ಖಾತೆಯಿಂದ 199 ರೂ. ಅನಧಿಕೃತವಾಗಿ ಕಡಿತಗೊಂಡಿತ್ತು.

ಈ ಬಗ್ಗೆ ಪೋನ್​ ಪೇ ಅವರನ್ನು ಸಂಪರ್ಕಿಸಲು ಮುಂದಾದ ವ್ಯಕ್ತಿ ಗೂಗಲ್​ನಲ್ಲಿ ನಂಬರ್ ಹುಡುಕಿದ್ದರು. ಆ ವೇಳೆ ಅಲ್ಲಿ ಸಿಕ್ಕ 7431067077ಗೆ ಜೂ.24 ರಂದು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ಕಡಿತವಾಗಿರುವ ಹಣವನ್ನು ಮತ್ತೆ ಜಮಾ ಮಾಡುತ್ತೇವೆಂದು ನಂಬಿಸಿ ಎಟಿಎಂ ಕಾರ್ಡ್ ಸಂಖ್ಯೆಯನ್ನು ಪಡೆದುಕೊಂಡಿದ್ದ.

ಬಳಿಕ, ವಂಚಕ ಪ್ಲೇ ಸ್ಟೋರ್​ನಿಂದ ಎನಿ ಡೆಸ್ಕ್​ ಆ್ಯಪ್ (Any desk app) ಡೌನ್ ಲೋಡ್ ಮಾಡಿಸಿದ್ದ. ಇದಾದ ಬಳಿಕ ಹಣ ವಾಪಾಸ್ ನೀಡುವುದಾಗಿ ಹೇಳಿ, ಬ್ಯಾಂಕ್​ ಖಾತೆಯಿಂದ ನಾಲ್ಕು ಹಂತಗಳಲ್ಲಿ 2,31,988 ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಕಳೆದುಕೊಂಡಿರುವ ವ್ಯಕ್ತಿ ಸೈಬರ್​ ವಂಚಕರ ವಿರುದ್ಧ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟಿಪಿ ಪಡೆದು ಹಣ ಡ್ರಾ :ಇನ್ನೊಂದು ಪ್ರಕರಣದಲ್ಲಿ, ತುಮಕೂರಿನ ವ್ಯಕ್ತಿಯೊಬ್ಬರಿಗೆನಿಮ್ಮ ಎಟಿಎಂ ಕಾರ್ಡ್ ಲಾಕ್ ಆಗಿದೆ ಎಂದು ಹೇಳಿ ಕಾರ್ಡ್ ನಂಬರ್ ಮತ್ತು ಒಟಿಪಿ ಪಡೆದು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 23,300 ರೂ.ಗಳನ್ನು ವ್ಯವಸ್ಥಿತವಾಗಿ ವರ್ಗಾಯಿಸಿಕೊಳ್ಳಲಾಗಿದೆ.

ಚಿಕ್ಕಣ್ಣ ಹಣ ಕಳೆದುಕೊಂಡ ವ್ಯಕ್ತಿ. ಜೂ.19ರಂದು ಸಂಜೆ 5:33 ಕ್ಕೆ ಚಿಕ್ಕಣ್ಣ ಅವರ ಮೊಬೈಲ್ ನಂಬರ್​​ಗೆ ಕರೆ ಮಾಡಿದ ಸೈಬರ್ ವಂಚಕರು, “ನಾವು ಬ್ಯಾಂಕ್ ನವರು ಎಂದು ಹೇಳಿ ಎಟಿಎಂ ಮಾಹಿತಿ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಚಿಕ್ಕಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ.

ಕಸ್ಟಮರ್ ನಂಬರ್ ಹುಡುಕಿ ಯಾಮಾರಿದ್ರು :ಮೂರನೇ ಪ್ರಕರಣದಲ್ಲಿ, ಜೂ. 24ರಂದು ತುಮಕೂರಿನ ವ್ಯಕ್ತಿಯೊಬ್ಬರು ತಮ್ಮ ಫೋನ್​ ಪೇ ಯುಪಿಐ ನಂಬರ್ ಕೇಳಲು ಗೂಗಲ್​ನಲ್ಲಿ ಕಸ್ಟಮರ್​ ಕೇರ್​ ನಂಬರ್ ಹುಡುಕಿದ್ದರು. ಅಲ್ಲಿ ಸಿಕ್ಕ ನಂಬರ್​ಗೆ ಕರೆ ಮಾಡಿದಾಗ, ಕಂಪನಿ ಚಾರ್ಜ್ ಎಂದು ಹೇಳಿದ ಸೈಬರ್ ವಂಚಕ ಒಟ್ಟು 14,833 ರೂಪಾಯಿ ವರ್ಗಾಯಿಸಿಕೊಂಡಿದ್ದಾನೆ.

ಸಂತೋಷ್ ಕುಮಾರ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿ, ಇವರನ್ನು ಯಾಮಾರಿಸಿದ ಸೈಬರ್ ಖದೀಮ 12,345, 1,989 ಮತ್ತು 499 ಸೇರಿದ ಒಟ್ಟು 14,833 ರೂ. ಹಣ ಲಪಟಾಯಿಸಿದ್ದಾನೆ. ಈ ಬಗ್ಗೆ ಸಂತೋಷ್​ ಕುಮಾರ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಿಎಸ್​ಪಿ ಕೇಂದ್ರದ ಹೆಸರಲ್ಲಿ ಪಂಗನಾಮ :ತುಮಕೂರಿನ ವ್ಯಕ್ತಿಯೊಬ್ಬರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಖದೀಮನೊಬ್ಬ ಕಂಪನಿಯಿಂದ ನಿಮಗೆ (CSP) ಗ್ರಾಹಕರ ಸೇವಾ ಕೇಂದ್ರ ತೆರೆದುಕೊಡುವೆನೆಂದು ನಂಬಿಸಿ 30,500 ರೂ. ಹಣ ವಂಚಿಸಿದ್ದಾನೆ. ದರ್ಶನ್ ಎಸ್. ಹೆಚ್ ವಂಚನೆಗೆ ಒಳಗಾಗಿರುವ ವ್ಯಕ್ತಿ. ಏಪ್ರಿಲ್ 4ರಂದು ಸಂಜೆ 5:29 ರ ಸುಮಾರಿಗೆ ಗ್ರಾಹಕರ ಸೇವಾ ಕೇಂದ್ರ ತೆರೆಯಲು ಲೈಸೆನ್ಸ್ ಕೊಡಿಸುವುದಾಗಿ ಹೇಳಿ, ಮಹೇಶ್ ಅಂಗಡಿ ಎಂಬ ವ್ಯಕ್ತಿಯು 10,500 ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ.

ಪುನಹಃ ಏಪ್ರಿಲ್ 10ರಂದು ಬೆಳಗ್ಗೆ 11:47ಕ್ಕೆ ಕರೆ ಮಾಡಿ 20,000 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಸಂಪರ್ಕಿಸಲು ಯತ್ನಿಸಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ.

ಆದ್ದರಿಂದ ಸಿಎಸ್​ಪಿ ಕೊಡುತ್ತೇನೆಂದು ನಂಬಿಸಿ ವಂಚಿಸಿರುವ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ದರ್ಶನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details