ತುಮಕೂರು :ಕೇಂದ್ರ ಸರ್ಕಾರದ ನೀತಿ ನಮಗೆ ಬ್ರಿಟಿಷ್ ಸರ್ಕಾರದ ಆಡಳಿತ ನೀತಿಯನ್ನು ಕಾಣುವಂತೆ ಮಾಡುತ್ತದೆ. ಹಿಟ್ಲರ್ ಸರ್ಕಾರಕ್ಕೂ ನರೇಂದ್ರ ಮೋದಿ ಸರ್ಕಾರಕ್ಕೂ ಯಾವುದೇ ರೀತಿಯ ವ್ಯತ್ಯಾಸ ಕಂಡು ಬರುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿರೋಧಿ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆಗಳನ್ನು ವಿರೋಧಿಸಿ ಇಂದು ರೈತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ರೈತರು ದೆಹಲಿಯನ್ನು ಪ್ರವೇಶಿಸದಂತೆ ಯೋಧರನ್ನು ಬಿಟ್ಟು, ರೈತರ ಮೇಲೆ ಲಾಠಿಚಾರ್ಜ್ ಮಾಡಿಸುವಂತಹ ಸಂಸ್ಕೃತಿಯನ್ನು ಬಿಜೆಪಿ ಸರ್ಕಾರ ಬೆಳೆಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ದೇಶದ ರೈತರನ್ನು ಉಗ್ರಗಾಮಿಗಳಂತೆ ಸರ್ಕಾರ ನಡೆಸಿಕೊಳ್ಳುತ್ತಿದ್ದು, ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕಿಡಿ ಕಾರಿದರು. ಇದೇ ವೇಳೆ ದೆಹಲಿ ಪ್ರತಿಭಟನೆಯಲ್ಲಿ ಮರಣ ಹೊಂದಿದ ರೈತರ ಆತ್ಮಕ್ಕೆ ಶಾಂತಿ ದೊರೆಯಲು ಮೌನಾಚರಣೆ ನಡೆಸಲಾಯಿತು.
ಇದನ್ನೂ ಓದಿ:ದೆಹಲಿಯಲ್ಲಿ ಮೊಳಗಿದ ಅನ್ನದಾತರ ಕಹಳೆ.. ಪ್ರತಿಭಟನೆಗೆ ರೈತ ಮುಖಂಡ ಸುಭಾಷ್ ಐಕೂರು ಸಾಥ್