ತುಮಕೂರು : ಸಾಮಾಜಿಕ ನ್ಯಾಯ ಒದಗಿಸಿದ ಜೆಡಿಎಸ್ ಪಕ್ಷ ಇಂದಿಗೂ ಜಾತ್ಯತೀತ ನಿಲುವು ತಾಳಿದೆ. ಸಮುದಾಯಗಳನ್ನೇ ಒಡೆದು ಆಳುವ ತಂತ್ರಗಳನ್ನು ಬಳಸಿ ನನಗೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಲು ಒಗ್ಗೂಡಿ ಜೆಡಿಎಸ್ ಪಕ್ಷ ಉಳಿಸಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮನವಿ ಮಾಡಿದರು.
ಗುಬ್ಬಿ ಪಟ್ಟಣದಲ್ಲಿ ಜೆಡಿಎಸ್ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಹಿಂದ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಿದ ಜೆಡಿಎಸ್ ಪಕ್ಷ ಎಂದಿಗೂ ಶಕ್ತಿ ಕುಂದಲ್ಲ. ರಾಜ್ಯದಲ್ಲಿ ಮತ್ತೇ ಹೋರಾಟದ ಮೂಲಕ ಪಕ್ಷ ಸದೃಢಗೊಳಿಸುತ್ತೇನೆ. ನಮ್ಮನ್ನು ತುಳಿಯಲು ಮುಂದಾದದವರಿಗೆ ಪಾಠ ಕಲಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು. ಇದು ಆವೇಶದ ನುಡಿಯಲ್ಲ, ನೋವಿನ ನಿವೇದನೆ ಎಂದು ಕೈ ಮುಗಿದು ಮನವಿ ಮಾಡಿದರು.
ಜೆಡಿಎಸ್ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆ ಒಕ್ಕಲಿಗ ಸಮುದಾಯದ ಸಣ್ಣ ರೈತ ಕುಟುಂಬದಿಂದ ಬಂದ ನಾನು ಪ್ರಾದೇಶಿಕ ಪಕ್ಷದ ಮಹತ್ವವನ್ನು ರಾಜ್ಯದ ಜನತೆಗೆ ತೋರಿದೆ. ನಮ್ಮ ಸಮುದಾಯವನ್ನೇ ಒಡೆದು ರಾಜಕಾರಣ ಮಾಡುವ ಕೆಲ ಪುಣ್ಯಾತ್ಮರು ದುರಂಹಕಾರದಲ್ಲೇ ಅಪಪ್ರಚಾರ ಮಾಡಿದ್ದಾರೆ.
ಇಂತಹರಿಗೆ ಉತ್ತರ ನೀಡುವವರು ನೀವುಗಳು. ಹಾಗಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಭಾವುಕರಾದ ಅವರು, ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡುವ ಕೆಲಸ ಮಾಡಿದ್ದೇನೆ. ಯುವಕ ಆರ್.ಅನಿಲ್ ವಿದ್ಯಾವಂತ ಹಾಗೂ ಜನಸೇವೆ ಮಾಡಲು ಉತ್ಸುಕರಾಗಿದ್ದಾರೆ. ಈ ನಿಟ್ಟಿನಲ್ಲಿ ಈ ಯುವ ಅಭ್ಯರ್ಥಿಗೆ ಮತ ಹಾಕಿ ನನ್ನ ಗೆಲುವಿಗೆ ಸಹಕರಿಸಿ ಎಂದು ಕೇಳಿಕೊಂಡರು.
ತುಮಕೂರು ಜಿಲ್ಲೆಯನ್ನು ಜೆಡಿಎಸ್ ಪಕ್ಷ ಮರೆಯುವುದಿಲ್ಲ. ಪಕ್ಷದ ಸದೃಢತೆಗೆ ಇದು ತವರೂರು ಆಗಿದೆ. ವಿಶೇಷ ಗೌರವ ಈ ಜಿಲ್ಲೆ ಮೇಲೆ ಇದ್ದೇ ಇದೆ. ಆದರೆ, ಇಲ್ಲಿನ ರಾಜಕೀಯ ಕೆಲ ಚಟುವಟಿಕೆಗಳು ನನಗೆ ಸಾಕಷ್ಟು ನೋವು ನೀಡಿದೆ. ನಮ್ಮವರಿಂದಲೇ ಆಗುತ್ತಿರುವ ನೋವು ಹೇಳತೀರದು. ನಮ್ಮಿಂದಾದ ಅನ್ಯಾಯವೇನು ಎಂಬುದು ತಿಳಿಯುತ್ತಿಲ್ಲ. ಎಲ್ಲಾ ಜನಾಂಗವನ್ನು ಒಗ್ಗೂಡಿಸಿ ಪಕ್ಷ ಸಾಗಿದೆ.
ಈ ಹಿಂದೆ ಪ್ರಾದೇಶಿಕ ಪಕ್ಷ ನೀಡುವ ಎಲ್ಲ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಜೆಡಿಎಸ್ ನೀಡಿರುವುದೆ. ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳಿಗೆ ಬಲ ತಂದ ಪಕ್ಷ ಮತ್ತಷ್ಟು ಕೆಲಸ ಮಾಡಲು ಈ ವಿಧಾನ ಪರಿಷತ್ತಿನ ಚುನಾವಣೆ ಫಲಿತಾಂಶ ಮುಖ್ಯವಾಗಲಿದೆ. ಈ ಹಿನ್ನೆಲೆ ಆರ್.ಅನಿಲ್ ಗೆ ಮತ ಹಾಕುವಂತೆ ಮನವಿ ಮಾಡಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಸಾರ್ವತ್ರಿಕ ಚುನಾವಣೆಯಂತೆ ಮೆರೆಗು ಪಡೆದ ವಿಧಾನ ಪರಿಷತ್ ಚುನಾವಣೆ ಸಲ್ಲದ ಕುತಂತ್ರ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಗೆಲುವು ಸಾಧಿಸುವಷ್ಟಿದೆ. ಚುರುಕಿನ ಕೆಲಸ ಮಾಡಿ ದೇವೇಗೌಡರನ್ನು ನಾನೇ ಸೋಲಿಸಿದೆ ಎಂದು ಹೇಳಿಕೊಂಡವರನ್ನು ಸೋಲಿಸೋಣ. ಜೊತೆಗೆ ಮುಂದಿನ 2023 ಕ್ಕೆ ಕುಮಾರಣ್ಣನವರ ಸರ್ಕಾರ ಸ್ಥಾಪಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು