ತುಮಕೂರು:ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮತಪತ್ರ ಆಧಾರಿತ ಚುನಾವಣೆ ನಡೆಯಬೇಕಿದೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಅಧಿಕಾರ ಹಾಗೂ ಹಣಬಲ ಸೇರಿದಂತೆ ಇವಿಎಂ ದುರ್ಬಳಕೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ ಎಂದು ತಿಳಿಸಿದರು.
ಇವಿಎಂ ಎಂಬುದು ಅತಿ ಸರಳವಾದ ಒಂದು ಸಾಫ್ಟವೇರ್ ಆಗಿದೆ, ಅದನ್ನು ಬದಲಾಯಿಸಲಾಗದು ಎಂಬುದು ಅರ್ಥವಾಗುತ್ತದೆ. ಅಲ್ಲದೇ ಟ್ಯಾಂಪರಿಂಗ್ ಮಾಡಲು ಅವಕಾಶವಿಲ್ಲ ಎಂಬುದಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಶಿರಾ ವಿಧಾನಸಭೆಯ ಉಪ ಚುನಾವಣೆಯಲ್ಲಿ ಮತಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದಾಗಿ ಮತದಾರರು ಸ್ಪಷ್ಟವಾಗಿ ನಂಬಿದ್ದಾರೆ. ಇದೊಂದು ಮೋಸದ ಚುನಾವಣೆಯಾಗಿದೆ ಎಂದರು.
ಹೀಗಾಗಿ ಶಿರಾ ವಿಧಾನಸಭೆ ಉಪಚುನಾವಣೆಯ ನ್ಯಾಯವಾಗಿ ನಡೆದಿಲ್ಲ ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯವಾಗಿದೆ. ಅಲ್ಲದೇ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದ 35 ಗ್ರಾಮ ಪಂಚಾಯಿತಿಗಳಲ್ಲಿ 22ರಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇಲ್ಲಿ ಮತಪತ್ರವನ್ನು ಬಳಸಿ ಚುನಾವಣೆ ನಡೆದಿದೆ ಎಂಬುದು ಗಮನಾರ್ಹ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳನ್ನು ಬಳಸಿದ್ದರೆ ಕಾಂಗ್ರೆಸ್ಗೆ ಈ ರೀತಿಯಾದ ಗೆಲುವು ಸಿಗುತ್ತಿರಲಿಲ್ಲ, ಅದನ್ನು ಕೂಡ ಬಿಜೆಪಿ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿತ್ತು ಎಂದು ಅನುಮಾನ ವ್ಯಕ್ತಪಡಿಸಿದರು.