ತುಮಕೂರು: ಚುನಾವಣಾ ಪ್ರಚಾರದ ವೇಳೆ ತಮ್ಮ ಮೇಲೆ ಕಲ್ಲೆಸೆತ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ನನ್ನ ಮೇಲೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಎಂದು ಹೇಳಲಾಗುವುದಿಲ್ಲ. ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿರಬಹುದೆಂದು ಎಂದು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಅದು ತುಂಬಾ ದಪ್ಪ ಇತ್ತು. ಯಾರೋ ದುಷ್ಕರ್ಮಿಗಳು ಕಲ್ಲೆಸೆದಿರಬಹುದು. ನಾನು 35 ವರ್ಷದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ ಎಂದು ಹೇಳಿದ್ರು.
ನಿನ್ನೆ ಅರಸಾಪುರ ಪಂಚಾಯತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದೆ. ಬಳಿಕ ಅಲ್ಲಿಂದ ಸಂಜೆ 4.30ರ ಸುಮಾರಿಗೆ ಭೈರೇನಹಳ್ಳಿಗೆ ಪ್ರಚಾರ ಬಂದೆ. ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ವೇಳೆ ನನ್ನನ್ನು ಎತ್ತಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದೆ. ಅಷ್ಟರಲ್ಲಿ ಜೆಸಿಬಿಯಲ್ಲಿ ಹೂವು, ಕ್ರೇನ್ ನಲ್ಲಿ ಹಾರ ಹಾಕೋಕೆ ತಯಾರು ಮಾಡಿದ್ದರು. ಈ ವೇಳೆ ಕಾರ್ಯಕರ್ತರು ನನ್ನನ್ನು ಎತ್ತಿಕೊಂಡಿದ್ದು, ಸಡನ್ ಆಗಿ ಒಂದು ಕಲ್ಲು ಬಂದು ನನ್ನ ತಲೆಗೆ ಬಿತ್ತು. ಆಗ ತಲೆಯಿಂದ ರಕ್ತ ಹರಿಯಲು ಶುರುವಾಯಿತು. ನಾನು ಕೂಗಿಕೊಂಡೆ ಎಂದರು.
ಕೆಂಪು ಹೂವು ಆಗಿದ್ದರಿಂದ ತಲೆಯಲ್ಲಿ ರಕ್ತ ಬರುತ್ತಿರುವುದು ಯಾರಿಗೂ ಗೊತ್ತಾಗಲಿಲ್ಲ. ಬಳಿಕ ನನ್ನ ರಕ್ತವನ್ನು ಗಮನಿಸಿ ಕೆಳಗೆ ಇಳಿಸಿದರು. ಅದಕ್ಕೂ ಮುಂಚೆ ನನ್ನನ್ನು ಭೇಟಿ ಮಾಡೋಕೆ ಅಲ್ಲಿಗೆ ನಮ್ಮ ವೈದ್ಯರೊಬ್ಬರು ಬಂದಿದ್ದರು. ಅವರು ನನ್ನನ್ನು ಅಕ್ಕಿರಾಂಪುರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ನಾನು ಪೊಲೀಸರಿಗೆ ತಿಳಿಸಿದ್ದೇನೆ, ಎಸ್ಪಿಗೆ ತಿಳಿಸಿದ್ದೇನೆ. ಕೂಡಲೇ ತನಿಖೆ ಮಾಡಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.