ತುಮಕೂರು: ರಾಜ್ಯ ಸರ್ಕಾರ ಹೊಸ ಜಿಲ್ಲೆಗಳನ್ನು ರೂಪಿಸಲು ಈಗಾಗಲೇ ಹಲವು ರೀತಿಯಲ್ಲಿ ಮುಂದಾಗುತ್ತಿದೆ. ಅಲ್ಲದೆ ಈ ಕುರಿತು ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಇದೀಗ ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಮಧುಗಿರಿ ನೂತನ ಜಿಲ್ಲೆಯೆಂದು ಘೋಷಿಸುವಂತೆ ಮಾಜಿ ಡಿಸಿಎಂ ಪರಮೇಶ್ವರ್ ಒತ್ತಾಯ
ವಿಜಯನಗರ ನೂತನ ಜಿಲ್ಲೆ ಬೇಡಿಕೆಗೆ ಒತ್ತಾಯ ಕೇಳಿಬಂದ ಬೆನ್ನಲ್ಲೇ ಈಗ ಬೇರೆ ಬೇರೆ ಜಿಲ್ಲೆಗಳಲ್ಲೂ ವಿಭಜನೆಯ ಕೂಗು ಕೇಳಿಬರುತ್ತಿವೆ. ಇದೀಗ ಮಧುಗಿರಿ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಬೇರ್ಪಡಿಸಬೇಕೆಂಬ ಒತ್ತಾಯವನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಮಾಡಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಈ ಕುರಿತು ಸುದೀರ್ಘವಾದ ಪತ್ರವೊಂದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿದ್ದು, ಮಧುಗಿರಿ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಮಧುಗಿರಿ ತಾಲೂಕು ಭೌಗೋಳಿಕವಾಗಿ ವಿಸ್ತಾರ ಹೊಂದಿದ್ದು, ಮಧುಗಿರಿ ಕೇಂದ್ರ ಸ್ಥಾನವಾಗಿ ಲೋಕೋಪಯೋಗಿ, ಜಿಲ್ಲಾ ಪಂಚಾಯತ್, ಎತ್ತಿನಹೊಳೆ ಯೋಜನೆ ಹೀಗೆ ಅನೇಕ ಉಪವಿಭಾಗಗಳಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೆ ಜಿಲ್ಲಾ ನ್ಯಾಯಾಲಯ ಕಟ್ಟಡ ಕೂಡ ಅಸ್ತಿತ್ವದಲ್ಲಿದೆ. ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯ ನೆರೆಯ ತಾಲೂಕುಗಳಾದ ಪಾವಗಡ, ಕೊರಟಗೆರೆ, ಶಿರಾ ತಾಲೂಕುಗಳಿಗೆ ಮಧುಗಿರಿ ವಾಣಿಜ್ಯೋದ್ಯಮ ಕೇಂದ್ರವಾಗಿದೆ.ಹೀಗಾಗಿ ಮಧುಗಿರಿಯನ್ನು ಕೊರಟಗೆರೆ, ಶಿರಾ, ಮಧುಗಿರಿ, ಪಾವಗಡ ಕಂದಾಯ ತಾಲೂಕುಗಳನ್ನಾಗಿ ಒಟ್ಟುಗೂಡಿಸಿ ಪ್ರತ್ಯೇಕ ನೂತನ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.