ತುಮಕೂರು :ನಾನು ಜೆಡಿಎಸ್ ನಲ್ಲಿದ್ದಾಗ ದೇವೇಗೌಡರು ಅಳುವುದನ್ನು ನೋಡಿದ್ದೆ. ಇದೀಗ ಮಗ ಸಹ ಅದನ್ನು ಕಲಿತುಕೊಂಡಿದ್ದಾನೆ, ಪುಣ್ಯಾತ್ಮ.. ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಲೇವಡಿ ಮಾಡಿದ್ದಾರೆ.
ದೇವೇಗೌಡರಂತೆ ಮಗ ಕೂಡ ಅಳುವುದನ್ನ ಕಲಿತು ಬಿಟ್ಟಿದ್ದಾನೆ.. ಹೆಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ಲೇವಡಿ ತುಮಕೂರಿನಲ್ಲಿ ಶಿರಾ ವಿಧಾನಸಭೆ ಉಪಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಅಳುವುದನ್ನು ಹಾಗೂ ವಿಷ ಕೊಡಿ, ಅಮೃತ ಕೊಡಿ ಎನ್ನುವುದನ್ನು ಕಲಿತಿರುವುದು ದೇವೇಗೌಡ ಕುಟುಂಬದವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸರಿಯಿಲ್ಲ. ಅಲ್ಲದೆ ಜನರು ಇಂತಹದಕ್ಕೆಲ್ಲಾ ಮರುಳಾಗುವುದಿಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ ಎಂದರು.
ಜನರಿಗೆ ಅನುಕಂಪ ಬರಲಿದೆ ಎಂದು ಕುಮಾರಸ್ವಾಮಿ ಅಳುತ್ತಿದ್ದಾನೆ. ಅಳುವುದು ಮುಖ್ಯ ಅಲ್ಲ, ಬದಲಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಏನು ಜನಪರ ಕೆಲಸ ಮಾಡಿದ್ದಾರೆ ಎಂಬುದು ಪ್ರಮುಖವಾಗಿರುತ್ತದೆ. ರಾಜಕೀಯ ದುರುದ್ದೇಶದ ಹೇಳಿಕೆಗಳನ್ನು ಕೊಡುವುದನ್ನು ಕಲಿತಿರುವುದು ದೇವೇಗೌಡ ಮತ್ತು ಅವರ ಕುಟುಂಬದವರು ಮಾತ್ರ. ಆದರೆ, ನಾವು ಜನಸೇವೆ ಮಾಡುತ್ತೇವೆ, ಮತ ಕೊಡಿ ಎಂದು ಕೇಳುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನನಗೆ ಒಂದೇ ಸಂದರ್ಭದಲ್ಲಿ ಕೊರೊನಾ ಸೋಂಕು ತಗುಲಿತ್ತು. ಅಲ್ಲದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆವು, ಇಬ್ಬರೂ ರಾಜಕೀಯ ದುರುದ್ದೇಶದಿಂದ ದಾಖಲಾಗಿದ್ದಾರೆ ಎಂದು ವ್ಯಾಖ್ಯಾನ ಮಾಡಿದ್ದರು ಎಂದು ತಿಳಿಸಿದರು. ಉಪ ಚುನಾವಣೆ ಘೋಷಣೆಯಾದ ನಂತರ ಸಾಕಷ್ಟು ಜನ ಬಿಜೆಪಿ ಹಾಗೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಭವಿಷ್ಯದ ಮುನ್ಸೂಚನೆಯಾಗಿದೆ ಎಂದಿದ್ದಾರೆ.