ಕರ್ನಾಟಕ

karnataka

By

Published : Jul 8, 2021, 7:56 PM IST

ETV Bharat / state

SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಊಟದ ವ್ಯವಸ್ಥೆ: ಸಚಿವ ಜೆ.ಸಿ.ಮಾಧುಸ್ವಾಮಿ

ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬೇಗ ಬರುವ ಹಿನ್ನೆಲೆಯಲ್ಲಿ ಯಾರೂ ಹಸಿವಿನಿಂದ ತೊಂದರೆ ಅನುಭವಿಸದಂತೆ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

exams
ಎಸ್​ಎಸ್​​ಎಲ್​ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆ

ತುಮಕೂರು:ಎಸ್​ಎಸ್​​ಎಲ್​ಸಿ ಪರೀಕ್ಷೆ ಬರೆಯಲು ಬರುವ ಮಕ್ಕಳು ಹಸಿವಿನಿಂದ ಬಳಲಬಾರದೆಂಬ ನಿಟ್ಟಿನಲ್ಲಿ ಅನಿವಾರ್ಯವಿರುವ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಎಸ್​ಎಸ್​​ಎಲ್​ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದ್ರು. ಪರೀಕ್ಷಾ ಕೇಂದ್ರಗಳಿಗೆ ಜವಾಬ್ದಾರಿಯಿಂದ ಪ್ರಶ್ನೆಪತ್ರಿಕೆಯನ್ನು ರವಾನಿಸಬೇಕು. ಎಸ್​ಎಸ್​​ಎಲ್​ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಲಸಿಕೆ ಪಡೆಯದ ಹೊರತು ಕರ್ತವ್ಯಕ್ಕೆ ನಿಯೋಜನೆ ಮಾಡುವಂತಿಲ್ಲ ಎಂದರು.

ಎಸ್​ಎಸ್​​ಎಲ್​ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆ

ಕೋವಿಡ್ ಸೋಂಕು ಲಕ್ಷಣಗಳುಳ್ಳ ಹಾಗೂ ಸೋಂಕಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕರೆದೊಯ್ಯಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕು ಹಾಗೂ ಪ್ರತ್ಯೇಕ ಕೊಠಡಿಯಲ್ಲಿಯೇ ಪರೀಕ್ಷೆ ಬರೆಯಲು ಕ್ರಮ ವಹಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಬೇಕು. ಒಂದು ಬೆಂಚಿನಲ್ಲಿ ಇಬ್ಬರಿಗೆ ಮಾತ್ರವೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

SSLC ಪರೀಕ್ಷೆಯನ್ನು ಜವಾಬ್ದಾರಿಯಿಂದ ಸುಸೂತ್ರವಾಗಿ ನಡೆಸಬೇಕು. ಉಡಾಫೆ ತೋರದೆ ಅವರವರ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಿಯಮಾನುಸಾರ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ರವಾನೆ ಮಾಡಬೇಕು. ಪರೀಕ್ಷಾ ಕೇಂದ್ರದಲ್ಲಿಯೂ ನಿಯಮಾನುಸಾರವೇ ಪ್ರಶ್ನೆಪತ್ರಿಕೆ ತೆರೆಯಬೇಕು. ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆಯನ್ನು ನಡೆಸಬೇಕು. ಮಕ್ಕಳನ್ನು ಕರೆತಂದ ಪೋಷಕರು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಕೇಂದ್ರದಿಂದ ದೂರ ಇರಬೇಕು ಎಂದು ಸೂಚಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪರೀಕ್ಷೆಯ ಮುನ್ನ ಮತ್ತು ನಂತರ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳು, ಪೀಠೋಪಕರಣ ಹಾಗೂ ಇನ್ನಿತರ ವಸ್ತುಗಳನ್ನು ಸ್ಯಾನಿಟೈಜ್ ಮಾಡಲು ಅಗತ್ಯ ಕ್ರಮ ವಹಿಸಬೇಕು. ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಅಗತ್ಯವಿರುವಷ್ಟು ಮಾಸ್ಕ್​ಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಪೊಲೀಸ್, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ, ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಹಾಗೂ ಅಧಿಕಾರಿಗಳು ಪರೀಕ್ಷಾ ದಿನದಂದು ಬೆಳಗ್ಗೆ 7.30ಕ್ಕೆ ಹಾಜರಾಗಿ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಎಂದು ತಿಳಿಸಿದರು.

ಯಾವುದೇ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಸೇರಿದಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‍ಒಪಿ ಅನುಷ್ಠಾನದಂತೆ ಸಿದ್ಧತೆ ಕೈಕೊಂಡು ಅಗತ್ಯವಿರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ತಿಳಿಸಿದರು.

ತುಮಕೂರು(ದ) ಶೈಕ್ಷಣಿಕ ಜಿಲ್ಲೆಯಲ್ಲಿ 90 ಕ್ಲಸ್ಟರ್ ಸಹಿತ ಹಾಗೂ 49 ಕ್ಲಸ್ಟರ್ ರಹಿತ ಸೇರಿ 139 ಪರೀಕ್ಷಾ ಕೇಂದ್ರಗಳಿದ್ದು, ಪರೀಕ್ಷೆಗೆ 23685 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅಂತೆಯೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 32 ಕ್ಲಸ್ಟರ್ ಸಹಿತ ಹಾಗೂ 49 ಕ್ಲಸ್ಟರ್ ರಹಿತ ಸೇರಿ ಒಟ್ಟು 81 ಕೇಂದ್ರಗಳಿದ್ದು, 12845 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.

ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 122 ಕ್ಲಸ್ಟರ್ ಸಹಿತ ಹಾಗೂ 98 ಕ್ಲಸ್ಟರ್ ರಹಿತ ಸೇರಿ ಒಟ್ಟು 220 ಪರೀಕ್ಷಾ ಕೇಂದ್ರಗಳಿದ್ದು, 36530 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 7 ಕ್ಲಸ್ಟರ್ ಸಹಿತ, 11ಕ್ಲಸ್ಟರ್ ರಹಿತ ಸೇರಿ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ 2534 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details