ತುಮಕೂರು: ವರಮಹಾಲಕ್ಷ್ಮೀ ಹಬ್ಬದಂದು ದೇವಿಯನ್ನು ಹೂಗಳಿಂದ ಶೃಂಗರಿಸಿ ಹಣ್ಣುಗಳನ್ನಿಟ್ಟು ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಕೊರೊನಾ ಕಾಟದಿಂದ ಜನರ ಬದುಕು ನೆಲಕಚ್ಚಿದ್ದು, ದುಡಿಮೆಗೆ ಹೊಡೆತ ಬಿದ್ದಿದೆ. ಇದ್ದ ಕೆಲಸವೂ ಇಲ್ಲದಂತಾಗಿದೆ. ಹೀಗಿರುವಾಗ ಜನರು ಹಬ್ಬ ಆಚರಿಸುವುದು ಕೊಂಚ ತ್ರಾಸದಾಯಕವೇ ಆಗಿದೆ. ಅದರಲ್ಲೂ ಹಣ್ಣು, ತರಕಾರಿಗಳ ಬೆಲೆಯಂತೂ ಗಗನಕ್ಕೇರಿದೆ.
ತುಮಕೂರಿನ ಅಂತರಸನ ಹಳ್ಳಿಯಲ್ಲಿರುವ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ಏರಿಕೆ ಜನರಿಗೆ ಬರೆ ಎಳೆದಂತಾಗಿದೆ. ಹೂವಿನ ಬೆಲೆ ನೋಡುವುದಾದರೆ ಕನಕಾಂಬರಕ್ಕೆ (ಮಾರೊಂದಕ್ಕೆ ) 400 ನಿಂದ 450 ರೂ, ಸೇವಂತಿಗೆ 200 ರಿಂದ 250 ರೂ, ಬಟನ್ಸ್ 300 ರೂ, ಚೆಂಡು ಹೂ 150ರಿಂದ 180 ರೂ ಆಗಿದೆ.
ಹೋಲ್ಸೆಲ್ ದರದಲ್ಲಿ ಬಿಡಿ ಹೂವು ಕೆ.ಜಿಗೆ ಮಾರಿಗೋಲ್ಡ್ 200 ರೂ, ಸಣ್ಣ ಗುಲಾಬಿ ಹೂ 230 ರಿಂದ 250 ರೂ, ಕಾಕಡ 400 ರಿಂದ 450 ರೂ. ಕಮಲದ ಹೂವು ಒಂದು ಜೊತೆಗೆ 20 ರೂ ಇದರ ಜೊತೆಗೆ ಬಾಳೆ ಕಂದು ಒಂದು ಜೊತೆಗೆ 30 ರಿಂದ 60 ರೂ ಗೆ ಮಾರಾಟ ಮಾಡಲಾಗುತ್ತಿದೆ.
ತುಮಕೂರಿನ ಅಂತರಸನ ಹಳ್ಳಿಯಲ್ಲಿರುವ ಮಾರುಕಟ್ಟೆಯಲ್ಲಿ ಹೂ, ಹಣ್ಣು, ತರಕಾರಿ ಬೆಲೆ ಏರಿಕೆಯಾಗಿದೆ. ಇನ್ನು ಹಣ್ಣುಗಳ ಬೆಲೆ ನೋಡುವುದಾದರೆ (ಕೆ.ಜಿ) ಮೋಸಂಬಿ 80, ಸೇಬು 200, ಮರಸೇಬು 160, ದ್ರಾಕ್ಷಿ 200, ದಾಳಿಂಬೆ 160, ಕಿತ್ತಳೆ 250, ಅನಾನಸ್ ಒಂದು ಜೊತೆಗೆ 60, ಸಪೋಟ 200 ರೂ. ಗೆ ಮಾರಲಾಗುತ್ತಿದೆ.
ಸರ್ಕಾರ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಕೊರೊನಾ ತಡೆಯುವಲ್ಲಿ ಎಷ್ಟೇ ಶ್ರಮ ಹಾಕಿದರೂ, ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದೇ, ಸರಿಯಾಗಿ ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಕಂಡು ಬಂತು.