ತುಮಕೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ವೊಂದು ಪಲ್ಟಿಯಾದ ಘಟನೆ ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ನಡೆದಿದೆ. ಹಾಲಗಾನಹಳ್ಳಿಯಿಂದ ಚಿಕ್ಕಮಾಲೂರಿಗೆ ಇಟ್ಟಿಗೆ ಲೋಡ್ ಸಾಗಿಸಲು ಹೋಗುತ್ತಿದ್ದಾಗ ಅನಾಹುತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ.
ಹಾಲಗಾನಹಳ್ಳಿ ದರ್ಶನ್ (20) ಸ್ಥಳದಲ್ಲೇ ಮೃತಪಟ್ಟಿದ್ದು, ರಮೇಶ್ (26) ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಅಜಿತ್ (24 ) ಕಾಲು ಮುರಿದಿದ್ದು, ಅಂಜಪ್ಪ ಸೇರಿದಂತೆ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಸ್ - ಟ್ರಕ್ ಮುಖಾಮುಖಿ ಡಿಕ್ಕಿ: ಐವರು ಸಾವು, 32 ಮಂದಿಗೆ ಗಾಯ
ಹಾಸಿಗೆ ತಯಾರಿಕೆ ಘಟಕದಲ್ಲಿ ಅಗ್ನಿ ಅವಘಡ:ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹಾಸಿಗೆ ತಯಾರಿಕೆ ಘಟಕವು ಸುಟ್ಟು ಬೂದಿಯಾಗಿರೋ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಹೊರವಲಯದಲ್ಲಿರುವ ಸೂಳೆಕೆರೆ ಬಳಿ ನಡೆದಿದೆ. ವಲೀಭಾಷಾ ಎಂಬುವರಿಗೆ ಸೇರಿದ ಹಾಸಿಗೆ ತಯಾರಿಕೆ ಘಟಕ ಇದಾಗಿದ್ದು, ನಿನ್ನೆ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.