ತುಮಕೂರು:ದೇವರ ಪೂಜೆಯ ಹಕ್ಕು ತನಗೆ ಬೇಕು ಎಂದು ಇಬ್ಬರು ಅರ್ಚಕರು ಗಲಾಟೆ ಮಾಡಿಕೊಂಡಿದ್ದು ಓರ್ವ ಅರ್ಚಕ ದೇಗುಲಕ್ಕೆ ಬೀಗ ಹಾಕಿ ಕಾಣೆಯಾಗಿದ್ದಾರೆ. ಈ ಘಟನೆ ಕೊರಟಗೆರೆ ತಾಲೂಕು ಕುರಂಕೋಟೆ ಗ್ರಾಮದಲ್ಲಿ ನಡೆದಿದೆ. ದೊಡ್ಡಕಾಯಪ್ಪ ಸ್ವಾಮಿಯ ಗರ್ಭಗುಡಿ ಮತ್ತು ದೇವಾಲಯಕ್ಕೆ ಬೀಗ ಹಾಕಲಾಗಿದೆ. ದೇವಸ್ಥಾನಕ್ಕೆ ಬೀಗ ಜಡಿದಿರುವ ಅರ್ಚಕ ಶ್ರೀನಿವಾಸ್ ಮೂರ್ತಿ ಕಾಣೆಯಾಗಿದ್ದಾರೆ. ಒಂದು ವರ್ಷದ ಅವಧಿಗೆ ಶ್ರೀನಿವಾಸ್ ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ತಹಶೀಲ್ದಾರ್, ಪೊಲೀಸರಿಗೆ ದೂರು: ಕಳೆದ ಶನಿವಾರ ಶ್ರೀನಿವಾಸ್ ಮೂರ್ತಿ ಅವರ ಪೂಜೆ ಅವಧಿ ಮುಗಿದಿದೆ. ಮತ್ತೋರ್ವ ಅರ್ಚಕರಾದ ವೆಂಕಟೇಶ್ ಅವರಿಗೆ ಅಧಿಕಾರ ಹಸ್ತಾಂತರವಾಗಬೇಕಿತ್ತು. ಶ್ರೀನಿವಾಸ್ ಮೂರ್ತಿ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ಇವರು ದೇಗುಲಕ್ಕೆ ಬೀಗ ಜಡಿದು ಪರಾರಿಯಾಗಿದ್ದಾರೆ. ದೊಡ್ಡಕಾಯಪ್ಪ ಸೇವಾ ಸಮಿತಿ ಮತ್ತು ಗ್ರಾಮಸ್ಥರು ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಹಶೀಲ್ದಾರ್ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ. ದೊಡ್ಡಕಾಯಪ್ಪ ಸ್ವಾಮಿಯ ದರ್ಶನ ಸಿಗದೇ ಭಕ್ತರಿಗೆ ನಿರಾಸೆಯಾಗಿದೆ. ದೊಡ್ಡಕಾಯಪ್ಪ ದೇಗುಲದ ಅರ್ಚಕ ಶ್ರೀನಿವಾಸಮೂರ್ತಿ ವಿರುದ್ಧ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.