ತುಮಕೂರು:ಕಲ್ಪತರು ನಾಡು ತುಮಕೂರು ಜಿಲ್ಲೆ ಬಹುತೇಕ ಬಯಲುಸೀಮೆ ಪ್ರದೇಶವನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಪರ್ಯಾಯ ಬೆಳೆಗಳತ್ತ ಆಸಕ್ತಿ ತಳೆದಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ರೈತರು ಮೆಕ್ಕೆಜೋಳ ಬೆಳೆಯುವ ಬದಲು ನೆಲೆಗಡಲೆ ಬೆಳೆಯುವತ್ತ ಆಸಕ್ತಿ ತೋರುತ್ತಿರುವುದು.
ಜಿಲ್ಲೆಯ ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಬಹುಭಾಗದಲ್ಲಿ ನಿರಂತರವಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಕಳೆದ ವರ್ಷ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯ ಗುರಿ ಹೊಂದಲಾಗಿತ್ತು.ಆದರೆ, ಕೇವಲ 16,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ನಿರೀಕ್ಷೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಇಳುವರಿ ಕೂಡಾ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿತ್ತು. ಇದರೊಂದಿಗೆ ಕನಿಷ್ಠ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೈನಿಕ ಹುಳು ಕಾಟದಿಂದ ಮೆಕ್ಕೆಜೋಳ ರೈತರ ಕೈಗೆ ಸಿಗದಂತಂತಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು.