ತುಮಕೂರು:ತೋಟಗಾರಿಕಾ ಬೆಳೆಗಳ ಮಾರಾಟ, ಖರೀದಿ ಹಾಗೂ ರೈತಪರವಾದ ವಿನೂತನ ಮಾರುಕಟ್ಟೆ ವ್ಯವಸ್ಥೆ ಜಿಲ್ಲೆಯಲ್ಲಿ ತಲೆಯೆತ್ತಲಿದ್ದು ಇದಕ್ಕಾಗಿ ಸದ್ದಿಲ್ಲದೆ ಸರ್ವ ಸಿದ್ಧತೆ ನಡೆದಿದೆ.
ಹೌದು, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಾಣಸಿಗುವ ರೈತರ ಉತ್ಪನ್ನಗಳು ಮತ್ತು ಮಾಹಿತಿ ವ್ಯವಸ್ಥೆಯ ಹಬ್ ತುಮಕೂರಿನಲ್ಲಿಯೂ ಸದ್ಯದಲ್ಲೇ ಆರಂಭವಾಗಲಿದೆ. ನಗರದ ಬಿಹೆಚ್ ರಸ್ತೆಗೆ ಹೊಂದಿಕೊಂಡಂತೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸುಮಾರು 9 ಎಕರೆ ವಿಸ್ತಾರವಾದ ಜಾಗವಿದ್ದು ಇಲ್ಲಿ ಇದನ್ನು ಆರಂಭಿಸಲು ಸರ್ಕಾರ ಉತ್ಸುಕವಾಗಿದೆ.
ತುಮಕೂರಿನಲ್ಲಿ ತಲೆಯೆತ್ತಲಿದೆ ರೈತಪರ ವಿನೂತನ ಮಾರುಕಟ್ಟೆ. ಉತ್ತಮ ಗುಣಮಟ್ಟದ ಹಣ್ಣುಗಳು, ಬಿತ್ತನೆ ಬೀಜಗಳು, ತೋಟಗಾರಿಕಾ ಇಲಾಖೆಯ ವತಿಯಿಂದ ನೀಡಲಾಗುವ ಸಸಿಗಳು, ಹೂವಿನ ಗಿಡಗಳು, ರೈತರಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ತೋಟಗಾರಿಕೆ ವಲಯದ ಕ್ಷೇತ್ರದ ಸಾಮಗ್ರಿಗಳ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.
ಇದಲ್ಲದೆ ರೈತರು ಈ ಸ್ಥಳದಲ್ಲಿ ಬಂದು ಸಂತೆಯನ್ನು ಮಾಡುವಂತಹ ಅವಕಾಶ ಮಾಡಿಕೊಡಲಾಗುತ್ತದೆ. ವಿಶೇಷವಾಗಿ ಸಿರಿಧಾನ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ವೆಂಡರ್ ಜೋನ್ ಮಾಡಲು ಸ್ಮಾರ್ಟ್ ಸಿಟಿ ವತಿಯಿಂದ 1.5 ಕೋಟಿ ರೂ ಗಳನ್ನು ಸಹ ತೋಟಗಾರಿಕೆ ಇಲಾಖೆಗೆ ನೀಡಲಾಗಿದೆ. ಈಗಾಗಲೇ ರೂಪುರೇಷೆಯನ್ನು ಕೂಡ ಸಿದ್ಧಪಡಿಸಲಾಗಿದೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಮತ್ತು ಐ ಸಿ ಹೆಚ್ ಆರ್ ಇವರುಗಳ ಘಟಕವನ್ನು ಕೂಡ ಇಲ್ಲಿ ತೆರೆಯಲಾಗುವುದು. ಈ ಮೂಲಕ ರೈತರ ಮತ್ತು ಸಾರ್ವಜನಿಕರಿಗೆ ತೋಟಗಾರಿಕಾ ಬೆಳೆಗಳ ಕುರಿತು ಉಪಯುಕ್ತ ಮಾಹಿತಿಯನ್ನು ಒದಗಿಸಿಕೊಡಲಾಗುವುದು. ಒಟ್ಟಾರೆ ತೋಟಗಾರಿಕಾ ಬೆಳೆಗಳ ಸಮಗ್ರ ಪರಿಚಯವನ್ನು ಮಾಡಿಕೊಡುವಂತಹ ಹಾಗೂ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿಕೊಡುವಂತಹ ವ್ಯವಸ್ಥೆ ಇದಾಗಲಿದೆ ಎಂದು ಹೇಳಬಹುದಾಗಿದೆ.