ತುಮಕೂರು :ಜಿಲ್ಲೆಯ ಬಹುತೇಕ ಬಯಲು ಸೀಮೆ ಪ್ರದೇಶದಲ್ಲಿ ಬೆಳೆಯುವಂತಹ ಟೊಮೆಟೊ ಬೆಳೆಯಲ್ಲಿ ಕಳೆದ ಎರಡು ತಿಂಗಳಿನಿಂದ ಗಣನೀಯ ಪ್ರಮಾಣದ ಇಳಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಬೇಸಿಗೆಯಲ್ಲಿ ಪೂರಕವಾದ ನೀರಾವರಿ ವ್ಯವಸ್ಥೆ ಇಲ್ಲದಿರುವುದು. ಇದರಿಂದ ಸದಾ ಜನರಿಂದ ಗಿಜಿಗುಡುತ್ತಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಜಿಲ್ಲೆಯ ಕೊರಟಗೆರೆ, ಗುಬ್ಬಿ ಭಾಗದಲ್ಲಿ ಇತ್ತೀಚೆಗೆ ಟೊಮೆಟೊ ಬೆಳೆಯಲಾಗುತ್ತಿತ್ತು, ಆದರೆ ಬೇಸಿಗೆಯಲ್ಲಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿರುವುದರಿಂದ ರೈತರು ಕೂಡ ಟೊಮೆಟೊ ಬೆಳೆದು ಕೈ ಸುಟ್ಟುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಕೆಲ ರೈತರು ಬೋರ್ವೆಲ್ ನೀರಿನ ಸಹಾಯದಿಂದ ಬೆಳೆದಿರುವ ಅಲ್ಪಸ್ವಲ್ಪ ಟಮೋಟಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ದೊರೆಯುತ್ತಿದೆ.