ತುಮಕೂರು:ವಿವಿಧ ಯೋಜನೆಯಡಿ ರೈತನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸರ್ಕಾರದಿಂದ ಹಲವು ಕೃಷಿ ಪರಿಕರಗಳನ್ನು ಪರಿಚಯಿಸಿ, ಸಬ್ಸಿಡಿ ದರದಲ್ಲಿ ಕೃಷಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಆದರೆ ಬಹುತೇಕ ಯೋಜನೆಗಳು ಅತಿ ಸಣ್ಣ ರೈತರಿಗೆ ತಲುಪುತ್ತಲೇ ಇಲ್ಲ ಎಂಬ ಆರೋಪಗಳಿವೆ.
ಈ ಆರೋಪಗಳಿಗೆ ಸಾಕ್ಷಿ ಎಂಬಂತೆ ಕೊರಟಗೆರೆ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಕೆಲ ಸಣ್ಣ ರೈತರು ಹೆಗಲ ಮೇಲೆ ನೊಗ ಹೊತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಹೀಗಾಗಿ ಒಂದು ದಿನ ಪಕ್ಕದ ಹೊಲದಲ್ಲಿ ಹೋಗಿ ಕೆಲಸ ಮಾಡಿದರೆ ಇನ್ನೊಂದು ದಿನ ಅದೇ ಹೊಲದವರು ಬಂದು ಮತ್ತೊಂದು ಹೊಲದಲ್ಲಿ ಕೃಷಿ ಚಟುವಟಿಕೆಗೆ ಸಹಕಾರಿಯಾಗುತ್ತಿದ್ದಾರೆ. ಅದೇ ರೀತಿ ಹೆಗಲ ಮೇಲೆ ನೇಗಿಲು ರೂಪದಲ್ಲಿ ಕೃಷಿ ಪರಿಕರವನ್ನು ಇಟ್ಟುಕೊಂಡು ಭೂಮಿ ಹದ ಮಾಡುತ್ತಿರುವುದು ಕೊರಟಗೆರೆ ತಾಲೂಕಿನಲ್ಲಿ ಕಂಡುಬರುತ್ತಿದೆ.