ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ನಕಲಿ ವೈದ್ಯರ ಹಾವಳಿ..... ಕ್ರಮ ಕೈಗೊಳ್ಳಲು ಹರಸಾಹಸ ಪಡುತ್ತಿರುವ ಆರೋಗ್ಯ ಇಲಾಖೆ - etv bharat

ತುಮಕೂರು ಜಿಲ್ಲೆಯಲ್ಲಿ ಇದುವರೆಗೆ 143 ಮಂದಿ ನಕಲಿ ಡಾಕ್ಟರ್​ಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ 45 ಕ್ಲಿನಿಕ್​ಗಳನ್ನು ಮುಚ್ಚಿಸಲಾಗಿದೆ. ಇನ್ನು 98 ಪಾರಂಪರಿಕ ವೈದ್ಯ ಪದ್ಧತಿಯನ್ನು ಅನುಸರಿಸಿ ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ತುಮಕೂರಿನಲ್ಲಿ ನಕಲಿ ವೈದ್ಯರ ಹಾವಳಿ

By

Published : Jul 22, 2019, 7:54 PM IST

ತುಮಕೂರು: ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡಿರುವ ನಕಲಿ ವೈದ್ಯರು ತುಮಕೂರು ಜಿಲ್ಲೆಯಲ್ಲಿ ಬೇರು ಬಿಟ್ಟಿದ್ದು ಅವರು ವಿರುದ್ಧ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಆರೋಗ್ಯ ಇಲಾಖೆ ಹರಸಾಹಸಪಡುತ್ತಿದೆ.

ಹೌದು, ತುಮಕೂರು ಜಿಲ್ಲೆಯಲ್ಲಿ ಇದುವರೆಗೆ 143 ಮಂದಿ ನಕಲಿ ಡಾಕ್ಟರ್​ಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ 45 ಕ್ಲಿನಿಕ್​ಗಳನ್ನು ಮುಚ್ಚಿಸಲಾಗಿದೆ. ಇನ್ನು 98 ಪಾರಂಪರಿಕ ವೈದ್ಯ ಪದ್ಧತಿಯನ್ನು ಅನುಸರಿಸಿ ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅವರುಗಳು ಆಲೋಪತಿ ಔಷಧಿಗಳನ್ನು ರೋಗಿಗಳಿಗೆ ನೀಡಲಾಗುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಕ್ಲಿನಿಕ್​ಗಳನ್ನು ಬಂದ್ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅವರೆಲ್ಲರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ನಕಲಿ ಡಾಕ್ಟರ್​ಗಳನ್ನು ಗುರುತಿಸಿದ್ದರೂ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ . ಅಲ್ಲದೆ ಅಂತಹ ಕ್ಲಿನಿಕ್ ಗಳನ್ನು ಸೀಸ್ ಮಾಡಲು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತುಮಕೂರಿನಲ್ಲಿ ನಕಲಿ ವೈದ್ಯರ ಹಾವಳಿ

ನಕಲಿ ವೈದ್ಯರೆಂದು ಗುರುತಿಸಿರುವಂತಹ 35 ಮಂದಿ ಆಯುಷ್ ಪದ್ಧತಿ ಸರ್ಟಿಫಿಕೇಟ್ ಹೊಂದಿದ್ದು, ಅವರನ್ನು ಆಯುಷ್ ವೈದ್ಯರೆಂದು ರಿಜಿಸ್ಟರ್ ಮಾಡಿಕೊಡಲು ಇಲಾಖೆಗೆ ಕಳುಹಿಸಲಾಗಿದೆ. ಇನ್ನುಳಿದಂತೆ ಆಯುಷ್ ಹಾಗೂ ಯುನಾನಿ ಪದ್ಧತಿಯ ಸರ್ಟಿಫಿಕೇಟ್​ಗಳನ್ನು ಇಟ್ಟುಕೊಂಡು ಕೆಲವರು ಅಲೋಪತಿ ವೈದ್ಯ ಪದ್ಧತಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಅವರನ್ನು ನಕಲಿ ವೈದ್ಯರೆಂದು ಗುರುತಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ಚಂದ್ರಿಕಾ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವ್ಯಾಪ್ತಿಯಲ್ಲಿ 30 ಹಾಗೂ ಶಿರಾ ತಾಲೂಕಿನ ವ್ಯಾಪ್ತಿಯಲ್ಲಿ 25 ನಕಲಿ ವೈದ್ಯರ ಕ್ಲಿನಿಕ್​ಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ, ಲಿಂಗದಹಳ್ಳಿ ಗ್ರಾಮದಲ್ಲಿ ಮತ್ತು ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿದೆ. ಕುಗ್ರಾಮಗಳಲ್ಲಿ ಇರುವ ಅನಕ್ಷರಸ್ಥರು ಮತ್ತು ಕಡು ಬಡವರನ್ನು ಟಾರ್ಗೆಟ್ ಮಾಡಿರುವಂತಹ ಈ ನಕಲಿ ವೈದ್ಯರು ತಮ್ಮ ಕರಾಳ ಹಸ್ತವನ್ನು ಚಾಚಿದ್ದಾರೆ. ಅಂತಹ ಸ್ಥಳಕ್ಕೆ ತೆರಳಿ ನಕಲಿಗಳನ್ನು ಮುಚ್ಚಿಸಲು ಹೋದರೆ ಜನರೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ ಅಲ್ಲದೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬರಲು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಡಾ. ಚಂದ್ರಿಕಾ.



ABOUT THE AUTHOR

...view details