ತುಮಕೂರು:ಜಿಲ್ಲೆಯಲ್ಲಿ ಈ ಬಾರಿ ಭರ್ಜರಿ ಮಳೆಯಾಗಿದ್ದು ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಲು ಜನಪ್ರತಿನಿಧಿಗಳು ಪೈಪೋಟಿ ಮೇರೆಗೆ ಆಗಮಿಸುತ್ತಿದ್ದಾರೆ.
ಕೊರಟಗೆರೆ ವ್ಯಾಪ್ತಿಯ ಗಟ್ಲಹಳ್ಳಿ ಕೆರೆ, ತುಂಬಾಡಿ ಕೆರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಬೃಹತ ಕೆರೆಗಳು ಕೋಡಿ ಬಿದ್ದಿವೆ. ಹೀಗಾಗಿ ಕೆರೆಗಳ ಬಳಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲು ಸ್ಥಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮತ್ತು ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ನಾ ಮುಂದು ತಾ ಮುಂದು ಎಂದು ಆಗಮಿಸುತ್ತಿದ್ದಾರೆ.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಪಿ.ಆರ್.ಸುಧಾಕರ್ ಲಾಲ್ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದ ಕೋರ ಹೋಬಳಿ, ಕೋಳಾಲಾ ಹೋಬಳಿ, ಸಿ.ಎನ್ ದುರ್ಗ ಹೋಬಳಿ, ಪುರವಾರ ಹೋಬಳಿ, ಹೊಳವನಹಳ್ಳಿ ಹೋಬಳಿ, ಕಸಬ ಹೋಬಳಿಗಳ ಹಲವಾರು ಗ್ರಾಮಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಹಳ್ಳಗಳಿಗೆ ಮತ್ತು ದೇವರಾಯನದುರ್ಗದಲ್ಲಿ ಉಗಮವಾಗಿ ಹರಿಯುವ ಸುವರ್ಣಮುಖಿ ನದಿಗೆ ಅಡ್ಡಲಾಗಿ ಸರಿ ಸುಮಾರು 25 ಕ್ಕೂ ಹೆಚ್ಚು ತಡೆಗೋಡೆ (ಚೆಕ್ ಡ್ಯಾಮ್)ಗಳನ್ನು ಅಂದು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ವರುಣನ ಕೃಪೆಯಿಂದ ಎಲ್ಲ ಡ್ಯಾಮ್ಗಳು ನೀರು ತುಂಬಿ ಹರಿಯುತ್ತಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.