ತುಮಕೂರು :ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿನ ಸಾಕಷ್ಟು ರಾಜಕೀಯ ಚಟುವಟಿಕೆಗಳನ್ನು ಗಮನಿಸಿರುವ ಚುನಾವಣಾ ಆಯೋಗ ಕ್ಷೇತ್ರದಲ್ಲಿ ಶಾಂತಿ ಹಾಗೂ ಮುಕ್ತ ಮತದಾನಕ್ಕಾಗಿ ವಿಶೇಷ ಗಮನಹರಿಸಿದೆ. ಈ ಕ್ಷೇತ್ರವನ್ನು ಸೂಕ್ಷ್ಮ ವಿಧಾನಸಭಾ ಕ್ಷೇತ್ರವೆಂದೇ ಪರಿಗಣಿಸಿ ಇಬ್ಬರು ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಿದೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಚುನಾವಣಾ ಅಧಿಕಾರಿಯಾಗಿರುವ ತುಮಕೂರು ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಅವರ, ಇಬ್ಬರು ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಇಲ್ಲಿ ಒಟ್ಟು 37 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎರಡು ವರ್ಣ ರೆಬಲ್ ಮತಗಟ್ಟೆಗಳೆಂದು ಗುರುತಿಸಿದ್ದು, 7 ವಿಶೇಷ ತಂಡಗಳ ಜೊತೆಗೆ 5 ಚೆಕ್ಪೋಸ್ಟ್ಗಳನ್ನು ಮಾಡಿದ್ದೇವೆ. ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲೂ ಮತದಾನಕ್ಕೆ ತೊಂದರೆ ಆಗದಂತೆ ಪೊಲೀಸ್ ಇಲಾಖೆ ಜೊತೆಗೆ ಚರ್ಚಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆಯೊಂದಿಗೆ ಹೆಚ್ಚುವರಿ ಪೊಲೀಸರ ನಿಯೋಜನೆಗೆ ಚರ್ಚೆ ನಡೆದಿದೆ ಎಂದು ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿಯನ್ನು ಪರಿಗಣಿಸಿರುವ ಚುನಾವಣಾ ಆಯೋಗ ಒಂದು ರೀತಿ ಸೂಕ್ಷ್ಮ ವಿಧಾನಸಭಾ ಕ್ಷೇತ್ರವೆಂದೇ ಪರಿಗಣಿಸಿ ಹೆಚ್ಚಿನ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಿಕೊಂಡಿದೆ. ಅಲ್ಲದೆ ಚುನಾವಣೆ ವೇಳೆ ಶಾಂತಿ ಹಾಗೂ ಮುಕ್ತ ಮತದಾನಕ್ಕಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು ಕೂಡ ನಿಯೋಜನೆ ಮಾಡಲು ಈಗಾಗಲೇ ಸಿದ್ಧತೆ ನಡೆಸಿದೆ.