ತುಮಕೂರು :ಪ್ರಸ್ತುತ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮಾರಾಟ ಜಾಲ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಇದು ಹೊಸದೇನೂ ಅಲ್ಲ. ನಾನು ಗೃಹ ಸಚಿವನಾಗಿದ್ದಾಗ ನನಗೆ ಸವಾಲಾಗಿತ್ತು ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಕೊರಟಗೆರೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ದ್ರವ್ಯ ಮಾರಾಟ ವಿಚಾರವನ್ನು ಸಿಎಂ ಹಾಗೂ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪಂಜಾಬ್ನಲ್ಲೂ ಡ್ರಗ್ಸ್ ಮಾಫಿಯಾ ಹೆಚ್ಚಾಗಿ ಉಡ್ತಾ ಪಂಜಾಬ್ ಆಗಿತ್ತು. ಅದೇ ರೀತಿ ಉಡ್ತಾ ಬೆಂಗಳೂರು ಆಗಬಾರದು ಅನ್ನೋದು ನಮ್ಮ ಅಭಿಪ್ರಾಯ. ಆಗ ಶಾಲಾ ಮಕ್ಕಳಿಗೆ ಚಾಕೊಲೇಟ್ನಲ್ಲಿ ಮಾದಕ ದ್ರವ್ಯ ಹಾಕಿ ಕೊಟ್ಟಿದ್ದು ಸಹ ನನ್ನ ಗಮನಕ್ಕೆ ಬಂದಿತ್ತು. ಕೋಟ್ಯಂತರ ರೂ. ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಈ ಪ್ರಕರಣಕ್ಕೂ ಚಿತ್ರರಂಗಕ್ಕೂ ನಂಟು ಇರೋದಾಗಿ ತಾಳೆ ಹಾಕಲಾಗಿದೆ. ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದರು.
ಈಚೆಗೆ ನಿಧನರಾದ ಶಾಸಕ ಸತ್ಯನಾರಾಯಣ ಅವರಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು 6 ತಿಂಗಳೊಳಗೆ ನಡೆಯಬೇಕಿದೆ. ನಮ್ಮ ಪಕ್ಷದಿಂದ ಚುನಾವಣೆಗೆ ನಾವೂ ತಯಾರಿ ಮಾಡುತ್ತೇವೆ. ನಮ್ಮ ಹಿರಿಯ ಮುಖಂಡ ಜಯಚಂದ್ರ ಆ ಕ್ಷೇತ್ರವನ್ನು ಪ್ರತಿನಿಧಿಸಿ ಕಳೆದ ಬಾರಿ ಸೋತಿದ್ದಾರೆ. ಅದನ್ನೆಲ್ಲ ಗಮನಿಸಿ, ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ ಎಂದರು. ಶಿರಾದಲ್ಲಿ ಯಾರು ಬೇಕಾದ್ರೂ ಸ್ಪರ್ಧಿಸಬಹುದು. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅವರು ಅಭ್ಯರ್ಥಿಯಾಗುತ್ತಾರೆ ಎಂದರು.