ತುಮಕೂರು :ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳು ‘ಗಳಿಕೆಯೊಂದಿಗೆ ಕಲಿಕೆ’ ಮಾಡಲಿ ಎಂಬ ಉದ್ದೇಶದಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಚಾಲನಾ ತರಬೇತಿ ನೀಡಲಾಗುತ್ತಿದೆ.
ತ್ರಿವಿಧ ದಾಸೋಹಕ್ಕೆ ಖ್ಯಾತಿಯಾದ ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಕಲಿತು ಉನ್ನತ ಹುದ್ದೆಗೇರಿದ್ದಾರೆ. ಹಲವು ಸಾಧನೆಗಳನ್ನೂ ಮಾಡಿದ್ದಾರೆ. ಅನಾಥ, ನಿರ್ಗತಿಕ ಹಾಗೂ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಮಠದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಆದರೆ, ಈ ವಿದ್ಯಾರ್ಥಿಗಳು ಈಗಿನಿಂದಲೇ ಸ್ವಾಲಂಬಿಗಳಾಗಬೇಕು. ಪಾಲಕರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಚಾಲನಾ ತರಬೇತಿ ನೀಡಲಾಗುತ್ತಿದೆ.
18 ವರ್ಷ ಪೂರೈಸಿದ ಪ್ರತಿ ವಿದ್ಯಾರ್ಥಿಗೂ ಚಾಲನಾ ತರಬೇತಿ ಕೊಟ್ಟು, ಚಾಲನಾ ಪರವಾನಿಗೆಯನ್ನೂ ಕೊಡಿಸಲು ಶ್ರೀ ಸಿದ್ಧಗಂಗಾ ಮಠ ಮುಂದಾಗಿದೆ. ಈಗಾಗಲೇ ಮೊದಲ ಬ್ಯಾಚಿನಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟು ಡಿಎಲ್ ವಿತರಣೆ ಮಾಡಲಾಗಿದೆ. ಶ್ರೀ ಸಿದ್ಧಗಂಗಾ ಮಠದಲ್ಲಿ ರೋಟರಿ ಹಾಗೂ ಸಿದ್ಧಲಿಂಗೇಶ್ವರ ಡ್ರೈವಿಂಗ್ ಸ್ಕೂಲ್ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿ ನೀಡಲಾಗುತ್ತಿದೆ.