ಗೃಹ ಸಚಿವ ಡಾ. ಜಿ ಪರಮೇಶ್ವರ್ ತುಮಕೂರು: ಜಿಲ್ಲೆಯಿಂದ ಏಳು ಮಂದಿ ಗೆದ್ದಿದ್ದೇವೆ, ಟಿ.ಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿದ್ದರೆ ನಮ್ಮ ಜಿಲ್ಲೆಗೆ ಶಕ್ತಿ ಬರುತ್ತಿತ್ತು ಎಂದು ನೂತನ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಶಿರಾ ಮತ್ತು ಪಾವಗಡ ಎರಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ, ಅವರಿಗೆ ಸಚಿವ ಸ್ಥಾನ ನೀಡಿದ್ದರೆ ಅಲ್ಲಿ ಅನುಕೂಲ ಆಗುತ್ತಿತ್ತು, ಅವರು ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿತ್ತು ಎಂದು ಟಿ.ಬಿ ಜಯಚಂದ್ರ ಪರ ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಒಪ್ಪಿಗೆ ಇರೋದು ಬೇರೆ ವಿಚಾರ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಿಭಾಯಿಸಬೇಕು. ಪಕ್ಷ ಯಾವ ಜವಾಬ್ದಾರಿ ಕೊಡುತ್ತೋ ಅದನ್ನ ಮಾಡಬೇಕು. ನನಗೆ ಬೇರೆ ಖಾತೆ ಸಿಗೋ ನಿರೀಕ್ಷೆ ಇತ್ತು, ಆದರೆ ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಗೃಹ ಖಾತೆ ಕೊಟ್ಟಿದ್ದಾರೆ. ಗೃಹ ಖಾತೆ ಬಹಳ ಮುಖ್ಯವಾದದ್ದು ಎಂದು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ತುಮಕೂರು ಜಿಲ್ಲೆ ಉಸ್ತುವಾರಿ ಯಾರಿಗೆ ಕೊಡಬಹುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಜೀರೋ ಟ್ರಾಫಿಕ್ ಬಗ್ಗೆ ಮಾತನಾಡಿ, ಮುಂಚೆ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರಿಗೆ ಜೀರೋ ಟ್ರಾಫಿಕ್ ಕಲ್ಪಿಸಲಾಗಿತ್ತು, ಈಗ ಅದನ್ನು ಮುಖ್ಯಮಂತ್ರಿಗಳು ರದ್ದು ಮಾಡಿದ್ದಾರೆ. ಹೀಗಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಯಾರಿಗೂ ಇಲ್ಲ ಎಂದರು.
ರಾಜ್ಯದಲ್ಲಿ ದಂಗೆಯಾಗುವ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಬಗ್ಗೆ ಮಾತನಾಡಿ, ರಾಜ್ಯದ ಪೊಲೀಸರಿಗೆ ಯಾವುದೇ ಅಹಿತಕರ ಘಟನೆ ನಡೆದರೆ ಅದನ್ನು ನಿಭಾಹಿಸುವ ಸಾಮರ್ಥ್ಯ ಇದೆ. ಕರ್ನಾಟಕ ಪೊಲೀಸ್ ಇಸ್ ಬೆಸ್ಟ್ ಪೊಲೀಸ್. ನಾನು ಈಗಾಗಲೇ ಎರಡು ಬಾರಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೀನಿ, ಒಳ್ಳೆಯ ವಾತಾವರಣ ಅಧಿಕಾರಿಗಳ ನಡುವೆ ಇದೆ. ಆದ್ದರಿಂದ ಅಂತಹ ಸಂದರ್ಭ ಬಂದರೆ ನಾವು ನಿಭಾಹಿಸುತ್ತೇವೆ. ಏನೂ ತೊಂದರೆ ಇಲ್ಲ ಎಂದು ಹೇಳಿದರು.
ಒಂದನೇ ತಾರೀಖು ಕ್ಯಾಬಿನೆಟ್ ಮೀಟಿಂಗ್:ನಾವು ಜನಸಮುದಾಯಕ್ಕೆ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ಸ್ಪಂದಿಸಿ ಜನ ನಮಗೆ ಮತ ಹಾಕಿದ್ದಾರೆ. ಎಲ್ಲಾ ಸಚಿವರು ಇದನ್ನ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು, ಜನರು ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ ಎಂದರು. ಕಾಂಗ್ರೆಸ್ ಗ್ಯಾರಂಟಿಗಳ ಜಾರಿ ವಿಚಾರವಾಗಿ ಮಾತನಾಡಿ, ನಾವು ಮೊದಲನೇ ಕ್ಯಾಬಿನೆಟ್ನಲ್ಲಿ ತೀರ್ಮಾನ ತಗೋತೀವಿ ಎಂದು ಹೇಳಿದ್ದೇವು. ಅದರಂತೆ ಆದೇಶ ಹೊರಡಿಸಿದ್ದೇವೆ. ಯಾವ ಯಾವ ಇಲಾಖೆಗೆ ಯಾವ ಯಾವ ಗ್ಯಾರೆಂಟಿಗಳು ಬರುತ್ತವೆ ಅವರಿಗೆ ಜಾರಿ ಮಾಡಲು ಹೇಳಿದ್ದೇವೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ನಿರ್ದೇಶನ ನೀಡಿದ್ದೇವೆ. ಒಂದನೇ ತಾರೀಖು ಕ್ಯಾಬಿನೆಟ್ ಮೀಟಿಂಗ್ ಇದೆ. ಅಂದು ಎಲ್ಲವೂ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಗ್ಯಾರಂಟಿ ಜಾರಿ ಸಂಬಂಧ ಸಿಎಂ ಮಹತ್ವದ ಸಭೆ: ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 12,038 ಕೋಟಿ ಹೊರೆ?