ತುಮಕೂರು :ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಹೇಮಾವತಿ ನದಿ ನೀರನ್ನು ಆಶ್ರಯಿಸಿರುವ ಜಿಲ್ಲೆಯ ಬಹುತೇಕ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಾಗೇ ಕುಣಿಗಲ್ ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಹನಿ ನೀರು ಕಾಣದ ದೊಡ್ಡಮಧುರೆ ಕೆರೆ ಇಂದು ತುಂಬಿ ನಳನಳಿಸುತ್ತಿದೆ.
ಅಂದು ನೀರಿಲ್ಲದೇ ಬರಡಾಗಿದ್ದ ಎಡೆಯೂರು ಹೋಬಳಿಯ ದೊಡ್ಡಮಧುರೆ ಕೆರೆಯ ಏರಿ ಮೇಲೆ ಆ ಭಾಗದ ಹಲವು ಗ್ರಾಮಸ್ಥರು ನೀರು ಹರಿಸುವಂತೆ ಆಗ್ರಹಿಸಿ ನಿರಂತರ ದಾಳಿ ನಡೆಸಿದ್ದರು. ಇದೀಗ ಕೆರೆ ತುಂಬಿಸಲಾಗಿದ್ದು ಗ್ರಾಮದ ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಕುಡಿಯುವ ನೀರಿಗಾಗಿ ಈ ಹಿಂದೆ ರೈತರೇ ಶ್ರಮದಾನ ಮಾಡುವ ಮೂಲಕ ಕೆರೆಗೆ ಸಂಪರ್ಕಿಸುವ D26 ನಾಲೆಯನ್ನು ದುರಸ್ತಿಗೊಳಿಸಿದ್ದರು. ಅವರ ಶ್ರಮದಾನದಿಂದಲೇ ಇದೀಗ ಕೆರೆ ತುಂಬಿದೆ.
ಜನ-ಜಾನುವಾರುಗಳಿಗೂ ಸಾಕಾಗುವಷ್ಟು ನೀರು ಕೆರೆಯಲ್ಲಿ ಸಂಗ್ರಹಗೊಂಡಿದ್ದರಿಂದ ಗ್ರಾಮಸ್ಥರ ಮೊಗದಲ್ಲಿ ಇದೀಗ ಹರ್ಷ ತಂದಿದೆ. ಸುಮಾರು 160 ಕಿ.ಮೀ ದೂರದ ಹೇಮಾವತಿ ಇಂದು ಈ ಕೆರೆಯ ಅಂಗಳದಲ್ಲಿ ನಳನಳಿಸುತ್ತಾ ಜೀವ ಕಳೆ ತುಂಬಿದ್ದಾಳೆ.
ದೊಡ್ಡಮಧುರೆ ಕೆರೆಗೆ ಹರಿದು ಬಂದ ಹೇಮಾವತಿ ನೀರು ಸುಮಾರು 20 ವರ್ಷಗಳಿಂದ ನೀರು ಹರಿಯುವ ನಿರೀಕ್ಷೆಯಲ್ಲಿ ಸೊರಗಿದ್ದ ಜನಕ್ಕೆ ಈಗ ಇನ್ನಿಲ್ಲದ ಸಂತೋಷ ಉಂಟಾಗಿದೆ. ಕರೆಗೆ ಸಂಪರ್ಕಿಸುವ ನಾಲೆ D26 ನಿರ್ಮಾಣವಾಗಿ ಎರಡು ದಶಕಗಳು ಕಳೆದಿದ್ದರೂ ನೀರು ಹರಿಯದೇ ಈ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ನೀರಿನ ಹಾಹಾಕಾರಕ್ಕೆ ತುತ್ತಾಗಿದ್ದರು.
ಮೊದಲ ಹಂತದಲ್ಲಿ 3 ದಿನ ನೀರು ಹರಿಸಲಾಗಿತ್ತು. ನಂತರ ಎರಡನೇ ಹಾಗೂ ಮೂರನೇ ಹಂತದಲ್ಲಿ ಮತ್ತೆ ಕೆರೆಗೆ ನೀರು ಹರಿಸಲಾಗಿದ್ದು ಸುಮಾರು ಮೂರು ತಿಂಗಳ ಬಳಿಕ ಕೆರೆ ತುಂಬಿ ಕೋಡಿ ಬಿದ್ದಿದೆ. ಇದೀಗ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿ, ಶಾಂತಿ ಪೂಜೆ ಹಾಗೂ ಗಂಗಾ ಪೂಜೆ ನೆರವೇರಿಸಿದ್ದಾರೆ.