ತುಮಕೂರು: ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆಗೆ ಸಚಿವ ಡಿಕೆ ಶಿವಕುಮಾರ್ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ಆಗಮಿಸಿದ್ದಾರೆ. ಸೋಲಾರ್ ಪಾರ್ಕ್ಗೆ ಭೂಮಿ ನೀಡಿದ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿದ ಡಿ.ಕೆ ಶಿವಕುಮಾರ್ ಮಾಹಿತಿ ಪಡೆದರು. ತುಮಕೂರಿನ ಪಾವಗಡ ತಾಲ್ಲೂಕಿನ ತಿರುಮಣಿಯ ಸೋಲಾರ್ ಪಾರ್ಕ್ ಕಚೇರಿ ಆವರಣದಲ್ಲಿ ಸಭೆ ನಡೆಸಲಾಯಿತು. ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಹೆಲಿಕಾಪ್ಟರ್ನಲ್ಲಿ ಆಗಮಿಸಿದರು. ನಾಗಲಮಡಿಕೆಯ ಹೆಲಿಪ್ಯಾಡ್ಗೆ ಬಂದಿಳಿದು, ರಸ್ತೆ ಮೂಲಕ ತಿರುಮಣಿಗೆ ತಲುಪಿದರು.
2016 ರಲ್ಲಿ ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 13,000 ಎಕರೆ (53 ಕಿಮಿ 2) ಪ್ರದೇಶದದಲ್ಲಿ ಸೌರ ಪಾರ್ಕ್ ನಿರ್ಮಿಸಿದ್ದರು. ಇದು ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಖ್ಯಾತಿಗೆ ಒಳಗಾಗಿತ್ತು. ಸದ್ಯ ತುಮಕೂರಿನ ಸೋಲಾರ್ ಪಾರ್ಕ್ 2400 ಮೆಗಾವ್ಯಾಟ್ ವಿದ್ಯುತ್ನ್ನು ಉತ್ಪಾದಿಸುತ್ತಿದೆ.
ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ "ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ನಿಮ್ಮೆಲ್ಲರ ಸಹಾಯದಿಂದ ಇಲ್ಲಿ ಮಾಡಿಸಿದ್ದೇನೆ. ನಂತರ ಇಲ್ಲಿಗೆ ನನಗೆ ಬರಲು ಆಗಿಲ್ಲ. ನಾವು ಜಮೀನನ್ನು ರೈತರಿಂದ ಖರೀದಿಸದೇ ಅವರ ಬಳಿಯಲ್ಲೇ ಬಿಟ್ಟು, ತಿಂಗಳಿಗೆ ಇಂತಿಷ್ಟು ಎಂದು ಜಮೀನು ಮಾಲೀಕರಿಗೆ ಹಣ ಬರುವಂತೆ ಮಾಡಿದ್ದೆವು. ಅದು ಈಗಲೂ ಸಮರ್ಪಕವಾಗಿ ವಿತರಣೆ ಆಗುತ್ತಿದೆ. ಈಗ ನೂತನ ಸರ್ಕಾರದ ಇಂಧನ ಸಚಿವರಾಗಿ ಹಿರಿಯ ರಾಜಕಾರಣಿ ಕೆ.ಜೆ ಜಾರ್ಜ್ ಅಧಿಕಾರ ವಹಿಸಿಕೊಂಡಿದ್ದು, ಇಂದು ಅವರೊಂದಿಗೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.