ತುಮಕೂರು :ಜಿಲ್ಲೆಯ ಶಿರಾ ತಾಲೂಕಿನ ಮಿನಿ ವಿಧಾನಸೌಧದ ಆವರಣದಲ್ಲಿ ಇಂದು ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ವೃದ್ಧರೊಬ್ಬರು ತಮ್ಮ ಮಗನಿಗೆ ಹೆಣ್ಣು ಕೊಡಿಸಬೇಕು, ಜೊತೆಗೆ ತಮ್ಮ ಮಗಳಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಅರ್ಜಿ ಸಲ್ಲಿಸಿದ ಪ್ರಸಂಗ ನಡೆಯಿತು. ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರಾಮಣ್ಣ ಎಂಬವರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ತಮ್ಮ ಅಹವಾಲನ್ನು ತೋಡಿಕೊಂಡರು. ಈ ವೇಳೆ ಜಿಲ್ಲಾಧಿಕಾರಿ, ರಾಮಣ್ಣ ಅವರಿಂದ ಅರ್ಜಿ ಸ್ವೀಕರಿಸಿ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಣ್ಣ, ನನ್ನ ಮಕ್ಕಳಿಗೆ ಹೆಣ್ಣು ಕೊಡುವವರು ಇಲ್ಲ. ನನ್ನ ಮಗ ಅನಕ್ಷರಸ್ಥನಾಗಿದ್ದಾನೆ. ಹೀಗಾಗಿ ಯಾರೂ ಹೆಣ್ಣು ಕೊಡುತ್ತಿಲ್ಲ. ಓದಿದವರಿಗೆ ಮಾತ್ರ ಹೆಣ್ಣು ಕೊಡುತ್ತಿದ್ದಾರೆ. ನನಗೆ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಅಲ್ಲದೇ ನನ್ನ ಮನೆತನ ಬೆಳೆಯಬೇಕಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ನನ್ನ ಸಮಸ್ಯೆ ಬಗೆಹರಿಸುವಂತೆ ಅರ್ಜಿಯನ್ನು ಕೊಟ್ಟಿದ್ದೇನೆ ಎಂದು ಹೇಳಿದರು.
ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶುಭ ಕಲ್ಯಾಣ್ ಅವರು ಇಂದು ಶಿರಾ ತಾಲೂಕಿನ ಜನತಾದರ್ಶನದಲ್ಲಿ ಭಾಗಿಯಾಗಿದರು. ಈ ಸಂದರ್ಭದಲ್ಲಿ ನೂರಾರು ಜನರ ಅಹವಾಲುಗಳನ್ನು ಆಲಿಸಿದರು. ಈ ವೇಳೆ, ಕರ್ನಾಟಕ ಸರ್ಕಾರದ ವಿಶೇಷ ನವದೆಹಲಿ ಪ್ರತಿನಿಧಿ ಹಾಗೂ ಶಿರಾ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.