ತುಮಕೂರು:ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಕ್ತ ಹಾಗೂ ಶಾಂತಿಯುತ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸರ್ವಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆ ಮತಗಟ್ಟೆಗಳಿಗೆ ಇವಿಎಂಗಳ ರವಾನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಜಿಲ್ಲೆಯಲ್ಲಿ 2683 ಮತಗಟ್ಟೆ, 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿ.. ಜಿಲ್ಲೆಯ ಒಟ್ಟು 11 ವಿಧಾನಸಭೆ ಕ್ಷೇತ್ರಗಳಲ್ಲಿ 2683 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತುಮಕೂರು ನಗರದ ಜ್ಯೂನಿಯರ್ ಕಾಲೇಜು ಸೇರಿದಂತೆ ಆಯಾ ತಾಲೂಕು ಕೇಂದ್ರದಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 11,644 ಮತಗಟ್ಟೆ ಅಧಿಕಾರಿಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 564 ಬಸ್ಗಳಲ್ಲಿ ಮತಗಟ್ಟೆಗಳಿಗೆ ಇವಿಎಂಗಳ ರವಾನೆ ಮಾಡಲಾಗುತ್ತಿದ್ದು ತಯಾರಿ ಭರದಿಂದ ಸಾಗಿದೆ.
ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣೆ ಅಧಿಕಾರಿ ವೈ ಎಸ್ ಪಾಟೀಲ್, ಮೇ 10 ( ಬುಧವಾರ) ನಡೆಯುವ ಮತದಾನಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ. 48 ಸಾವಿರದಷ್ಟು ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 22,47,932 ಮತದಾರರು ಜಿಲ್ಲೆಯಲ್ಲಿ ಇದ್ದಾರೆ ಎಂದು ಹೇಳಿದ್ರು.
2683 ಮತಗಟ್ಟೆಗಳಲ್ಲಿ 545 ಮತಗಟ್ಟೆ ಸೂಕ್ಷ್ಮ, ಅತಿ ಸೂಕ್ಷ್ಮ:325 ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ. 545 ಮತಗಟ್ಟೆಗಳನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 2683 ಮತಗಟ್ಟೆಗಳಿವೆ ಅದರಲ್ಲಿ 1363 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ.