ತುಮಕೂರು:ನಿಧನವಾಗಿರೋ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನ ಇಲ್ಲದೇ ಇರುವುದರಿಂದ ಬೇಸತ್ತ ಗ್ರಾಮಸ್ಥರು ಶವವನ್ನ ರಸ್ತೆಯಲ್ಲಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಭಾನುವಾರ ಬೆಳಗ್ಗೆ ರೊಪ್ಪ ಗ್ರಾಮದ ರಂಗಪ್ಪ(54) ಎಂಬುವವರು ನಿಧರಾಗಿದ್ದರು.
ಅವರ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಸ್ಮಶಾನವಾಗಲಿ, ರಂಗಪ್ಪ ಅವರ ಸ್ವಂತ ಸ್ಥಳವಾಗಲಿ ಇಲ್ಲದೇ ಕುಟುಂಬಸ್ಥರು ಪರದಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಮೃತ ರಂಗಪ್ಪ ಅವರ ಶವವನ್ನ ರಸ್ತೆಯಲ್ಲಿಟ್ಟು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹಿಂದೂ-ಮುಸಲ್ಮಾನ್ ಸಮುದಾಯದ ನೂರಾರು ಮನೆಗಳಿರುವ ಈ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಥಳ ಇಲ್ಲದೆ ಪ್ರತಿ ಭಾರಿಯೂ ಇದೇರೀತಿ ಗ್ರಾಮಸ್ಥರು ಪರದಾಡುತ್ತಾರಂತೆ, ಇದರಿಂದ ಬೇಸತ್ತಿರುವ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಪಧಾಧಿಕಾರಿಗಳು ಗ್ರಾಮದಲ್ಲಿ ಮೃತರಾದವರ ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ರಸ್ತೆಯಲ್ಲಿ ಶವವಿಟ್ಟು ಧರಣಿ ನಡೆಸುವ ಮೂಲಕ ಒತ್ತಾಯಿಸಿದ್ದಾರೆ.
ನಿನ್ನೆಯಿಂದ ಶುರುವಾದ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಶಾಸಕ ವೆಂಕಟರಮಣಪ್ಪ ಹಾಗೂ ತಹಶೀಲ್ದಾರ್ ವರದರಾಜು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಸ್ಮಶಾನಕ್ಕೆ ಜಾಗ ಹುಡುಕುವಲ್ಲಿ ನಿರತರಾಗಿದ್ದಾರೆ. ರೊಪ್ಪ ಗ್ರಾಮದ ಪಕ್ಕದ ಗ್ರಾಮ ಟಿ.ಎನ್ ಪೇಟೆಯಲ್ಲಿ ಸ್ಮಶಾನಕ್ಕೆ ಜಾಗ ಹುಡುಕಲಾಗಿದೆ. ಆದರೆ ಇದಕ್ಕೆ ಟಿ.ಎನ್ ಪೇಟೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರೊಪ್ಪದಲ್ಲೇ ಸ್ಮಶಾನಕ್ಕೆ ಅಧಿಕಾರಿಗಳು ಜಾಗ ಹುಡುಕಾಟ ನಡೆಸಿದ್ದಾರೆ.