ತುಮಕೂರು: ನಗರದಲ್ಲಿ ಈ ಬಾರಿ ಹಿಂದೂ ಮಹಾಸಭಾ ಗಣಪತಿ ಉತ್ಸವಕ್ಕೆ ವೀರ ಸಾವರ್ಕರ್ ಭಾವಚಿತ್ರವುಳ್ಳ ಧ್ವಜಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಅವುಗಳನ್ನು ಇಂದು ಅನಾವರಣಗೊಳಿಸಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಗಣೇಶ ಉತ್ಸವವನ್ನು ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರಲ್ಲಿ ವೀರ ಸಾವರ್ಕರ್, ಭಗತ್ ಸಿಂಗ್ ಅವರ ಭಾವಚಿತ್ರಗಳುಳ್ಳ ಕೇಸರಿ ಧ್ವಜಗಳನ್ನು ಉತ್ಸವದಲ್ಲಿ ಕೊಂಡೊಯ್ಯಲು ಹಾಗೂ ಅಲ್ಲಲ್ಲಿ ಆರೋಹಣ ಮಾಡಲಾಗುತ್ತದೆ.
ನಗರದ ಟೌನ್ ಹಾಲ್ ವೃತ್ತದಲ್ಲಿರುವ ಗಣೇಶ ದೇವಸ್ಥಾನದ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು, ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದಾರೆ. ನಗರದ ಸುಮಾರು ಐದು ಕಡೆ ಈಗಾಗಲೇ ವೀರ ಸಾವರ್ಕರ್ ಭಾವಚಿತ್ರ ಹೊಂದಿರುವ ಕಟೌಟ್ಗಳನ್ನು ಕೂಡ ಹಾಕಿದ್ದಾರೆ. ಅಲ್ಲದೇ ಇದೀಗ ಸಾವರ್ಕರ್ ಭಾವಚಿತ್ರ ಇರುವ ಕೇಸರಿ ಧ್ವಜಗಳನ್ನು ನಗರದ ಎಲ್ಲೆಡೆ ಹಾಕಲು ನಿರ್ಧಾರ ಮಾಡಿದ್ದಾರೆ.