ತುಮಕೂರು:ನಗರದಲ್ಲಿ ಬಾಣಂತಿ ಹಾಗೂ ಅವಳಿ ಮಕ್ಕಳು ಅಸುನೀಗಿದ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಕಾರಣಕ್ಕೆ ಈ ದುರಂತ ಸಂಭವಿಸಿದೆ. ಇದಕ್ಕೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಭಾರತಿ ನಗರದಲ್ಲಿ ವಾಸವಿದ್ದ ತಮಿಳುನಾಡು ಮೂಲದ ಕಸ್ತೂರಿ ಎಂಬುವವರೇ ಮೃತರು. ಕಳೆದ ಒಂದು ತಿಂಗಳಿಂದ 6 ವರ್ಷದ ಮಗಳ ಜೊತೆ ಭಾರತಿ ನಗರದಲ್ಲಿ ಕಸ್ತೂರಿ ವಾಸವಿದ್ದರು. ಕಡುಬಡತದ ಇರುವ ತುಂಬು ಗರ್ಭಿಣಿಯಾಗಿದ್ದರು. ನಿನ್ನೆ (ನ.2) ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು.
ತಾಯಿ ಕಾರ್ಡ್ ಆಧಾರ್ ಕಾರ್ಡ್ ಇರಲಿಲ್ಲ: ಇವರ ಕಷ್ಟಕ್ಕೆ ಮರುಗಿದ್ದ ಸ್ಥಳೀಯರು ಸ್ವಲ್ಪ ಹಣ ಕೊಟ್ಟು ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಕಸ್ತೂರಿ ಜೊತೆಗೆ ಪಕ್ಕದ ಮನೆಯ ಅಜ್ಜಿಯೊಬ್ಬರು ಕೂಡ ಆಸ್ಪತ್ರೆಗೆ ಬಂದಿದ್ದರು. ಆದರೆ, ಕಸ್ತೂರಿ ಬಳಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂದು ಆಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಲಾಗ್ತಿದೆ.
ಅಲ್ಲದೇ, ವೈದ್ಯರ ಬಳಿ ಅಂಗಲಾಚಿ ಬೇಡಿದರೂ ಸ್ಪಂದಿಸಿಲ್ಲವಂತೆ. ನಾವು ಚಿಕಿತ್ಸೆ ಕೊಡಲ್ಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇವೆ, ಅಲ್ಲಿಗೆ ಹೋಗಿ ಎಂದು ವೈದ್ಯೆಯೊಬ್ಬರು ಹೇಳಿದ್ದರಂತೆ. ಅಲ್ಲಿಗೆ ಹೋಗಲು ಹಣ ಇಲ್ಲದೇ ಕಸ್ತೂರಿ ನೋವಿನಲ್ಲೇ ವಾಪಸ್ ಮನೆಗೆ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ.