ತುಮಕೂರು:ಸುಮಾರು ನಾಲ್ಕು ವರ್ಷದ ಹುಲಿ ಮೃತದೇಹ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸಿಮೆಂಟ್ ಪೈಪ್ ಒಳಗೆ ಹುಲಿಯ ಮೃತದೇಹ ಕಂಡುಬಂದಿದ್ದು, ಇದರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹುಲಿ ಇರುವಿಕೆಯ ಹಾಗೂ ಸಂಚಾರದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈವರೆಗೂ ಜಿಲ್ಲೆಯಲ್ಲಿ ಎಲ್ಲಿಯೂ ಹುಲಿ ಪತ್ತೆಯಾಗಿರಲಿಲ್ಲ. ಕಳೆದ ಒಂದು ವಾರದಿಂದ ಸುಮಾರು ನಾಲ್ಕು ವರ್ಷದ ಹುಲಿ ಓಡಾಡುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೂ ಲಭ್ಯವಾಗಿತ್ತು. ಅಲ್ಲದೇ ಈ ಬಗ್ಗೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಪರಿಶೀಲನೆ ನಡೆಸಿದ್ದರು.
ಇದೀಗ ಹುಲಿಯ ಮೃತದೇಹ ಪತ್ತೆಯಾಗಿದ್ದು, ಭದ್ರಾ ಅಭಯಾರಣ್ಯದಿಂದ ವೈದ್ಯರು ಸ್ಥಳಕ್ಕೆ ಬಂದು ಶವ ಪರೀಕ್ಷೆ ನಡೆಸಲಿದ್ದಾರೆ. ನಂತರವಷ್ಟೇ ಹುಲಿ ಸಾವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಮಡಿಕೇರಿಯಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಕೇವಲ 24 ಗಂಟೆಗಳಲ್ಲಿ ಹುಲಿಯೊಂದು ತಾತ ಹಾಗೂ ಮೊಮ್ಮಗನನ್ನು ಬಲಿ ಪಡೆದಿರುವ ಘಟನೆ ಒಂದು ದಿನದ ಹಿಂದೆಯಷ್ಟೆ ನಡೆದಿತ್ತು. ಕುಟ್ಟ ಗ್ರಾಮದ ಪಲ್ಲೇರಿಯಲ್ಲಿ ಕಾಫಿ ತೋಟದ ಮನೆಯ ಮುಂದೆ ಆಟವಾಡುತ್ತಿದ್ದ ಚೇತನ್ ಎನ್ನುವ 12 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ, ಬಾಲಕನನ್ನು ಕೊಂದು ಹಾಕಿತ್ತು. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹುಲಿ ದಾಳಿಯಿಂದ ಸಾವನ್ನಪ್ಪಿದ್ದ ಮೊಮ್ಮಗನ ಶವವನ್ನು ನೋಡಲು ಬಂದ ತಾತನ ಮೇಲೆಯೂ ಹುಲಿ ದಾಳಿ ಮಾಡಿ, ಕೊಂದು ಹಾಕಿತ್ತು.