ತುಮಕೂರು:ಊರ ಹೊರಗಿನ ಗುಡಿಸಲಿನಲ್ಲಿ ಬಾಣಂತಿಯೊಬ್ಬಳು ಆಗ ತಾನೆ ಹುಟ್ಟಿದ ಮಗು ಜೊತೆ ವಾಸ ಮಾಡುತ್ತಿದ್ದಾರೆ. ಇದು ಕಾಡುಗೊಲ್ಲ ಸಮುದಾಯದ ಆಚರಣೆ. ಇಂಥ ಆಚರಣೆಯನ್ನು ಇಂದಿಗೂ ಈ ಸಮುದಾಯ ನಡೆಸಿಕೊಂಡು ಬರುತ್ತಿದೆ. ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇದಕ್ಕೊಂದು ಉದಾಹರಣೆ ದೊರೆಯಿತು.
ಊರ ಹೊರಗಿರುವ ಗುಡಿಸಲಿನಲ್ಲಿ ವಾಸಿಸುತ್ತಿರುವ ವಸಂತ ಎಂಬ ಬಾಣಂತಿಯದ್ದು ನರಕಯಾತನೆಯಾಗಿದೆ. ತುಂತುರು ಮಳೆ, ಚಳಿ, ಗಾಳಿಯ ನಡುವೆ ಗುಡಿಸಲಿನಲ್ಲಿ ಈಕೆ ಇದ್ದಾರೆ. ಐದು ದಿನಗಳ ಹಿಂದೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇವರಿಗೆ ಹೆರಿಗೆ ಆಗಿತ್ತು. ಹೆರಿಗೆ ಮುಗಿಸಿ ಮರಳಿ ಗ್ರಾಮಕ್ಕೆ ಬಂದವರನ್ನು ಪೋಷಕರೇ ಮನೆಗೆ ಸೇರಿಸಿಕೊಂಡಿಲ್ಲ. ಊರ ಹೊರಗಿನ ಗುಡಿಸಿಲಿಗೆ ಇವರನ್ನು ಕಳುಹಿಸಿದ್ದಾರೆ. ಇದೀಗ ಸಣ್ಣ ಗುಡಿಸಲಿನಲ್ಲಿ ಬಾಣಂತಿ ಮತ್ತು ಮಗು ವಾಸವಿದ್ದಾರೆ. ಇವರ ಸಂಪ್ರದಾಯದಂತೆ ಎರಡು ತಿಂಗಳುಗಳ ಕಾಲ ಈ ಗುಡಿಸಲಿನಲ್ಲಿಯೇ ಇರಬೇಕಾಗಿದೆ.
"ನಮ್ಮ ದೇವರಿಗೆ ಸೂತಕ ಆಗಲ್ಲ, ಹಾಗಾಗಿ ನಾವು ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ" ಎನ್ನುತ್ತಾರೆ ಗೊಲ್ಲ ಸಮುದಾಯದವರು. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು. ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಆಗಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ಈ ಮೂಢ ನಂಬಿಕೆಗಳ ನಡುವೆ ಬಾಣಂತಿಯ ಸಂಕಷ್ಟ ಯಾರಿಗೂ ಕೇಳದಾಗಿದೆ.