ಎಸ್ಪಿ ಕಚೇರಿ ಪಕ್ಕದಲ್ಲಿನ ಎಟಿಎಂ ಯಂತ್ರದಿಂದ ಲಕ್ಷಾಂತರ ರೂ. ದೋಚಿದ ಕಳ್ಳರು ತುಮಕೂರು:ನಗರದ ಹೃದಯ ಭಾಗದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸೇರಿದ ಎಟಿಎಂ ದೋಚಿರುವ ಕಳ್ಳರು ಸುಮಾರು 2,90,000 ನಗದು ದೋಚಿ ಪರಾರಿಯಾಗಿದ್ದಾರೆ. ಎಸ್ಪಿ ಕಚೇರಿ ಪಕ್ಕದಲ್ಲಿಯೇ ಇರುವ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಿದ್ದಾರೆ. ಎಟಿಎಂ ಯಂತ್ರ ಬಿಎಚ್ ರಸ್ತೆಗೆ ಹೊಂದಿಕೊಂಡಂತಿದೆ.
ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಯಲ್ಲಿ ಪ್ರಕರಣ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬ್ಯಾಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿದೆ. ಕಳ್ಳರು ಸಿಸಿಟಿವಿ ಕ್ಯಾಮರಾವನ್ನು ಒಡೆದು ಹಾಕಿದ್ದಾರೆ. ಎನ್ಎಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಲಗಿದ್ದ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಗ; ಬೆಂಗಳೂರಿನಲ್ಲಿ ಪ್ರಕರಣ
ಔಷಧ ಅಂಗಡಿಯ ಶಟರ್ ಮುರಿದು ಹಣ ದೋಚಿದ ಖದೀಮ:ತುಮಕೂರು ನಗರದ ಮೆಡಿಕಲ್ ಶಾಪ್ ಶಟರ್ ಮುರಿದು ಕಳ್ಳನೊಬ್ಬ ಒಳನುಗ್ಗಿದ್ದಾನೆ. ಪಾಲನೇತ್ರಯ್ಯ ಮೆಡಿಕಲ್ ಶಾಪ್ನಲ್ಲಿ ಹಣ ದೋಚಿ ಖದೀಮ ಪರಾರಿಯಾಗಿದ್ದಾನೆ. ಬಿ.ಎಚ್ ರಸ್ತೆಯಲ್ಲಿರುವ ಮೆಡಿಕಲ್ ಶಾಪ್ ಇದಾಗಿದೆ. ಮುಖಕ್ಕೆ ಮಂಕಿ ಕ್ಯಾಪ್ ಧರಿಸಿಕೊಂಡು ಕಳ್ಳತನಕ್ಕೆ ಬಂದಿದ್ದು, ನಾಲ್ಕೈದು ನಿಮಿಷಗಳ ಕಾಲ ಮೆಡಿಕಲ್ ಶಾಪ್ನಲ್ಲಿ ಹುಡುಕಾಟ ನಡೆಸಿದ್ದಾನೆ. ಬ್ಯಾಟರಿ ಬೆಳಕಿನಲ್ಲಿ ಕ್ಯಾಶ್ಕೌಂಟರ್ ಹುಡುಕಾಡಿದ್ದು, ಕೊನೆಗೆ ಚಿಲ್ಲರೆ ಹಣ ತೆಗೆದುಕೊಂಡು ಹೋಗಿದ್ದಾನೆ. ಕಳ್ಳನ ಶೋಧ ಕಾರ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎನ್ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹೆಂಡತಿಯನ್ನು ತಬ್ಬಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ ಪತಿ! ಒಂದೇ ಬುಲೆಟ್ಗೆ ಹಾರಿಹೋಯ್ತು ಇಬ್ಬರ ಪ್ರಾಣಪಕ್ಷಿ
ಕಳೆದ ಮೂರು ತಿಂಗಳಿಂದ ತುಮಕೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ವಿವಿಧ ಮಳಿಗೆಗಳ ಮೇಲೆ ಕಳ್ಳರು ಹೊಂಚು ಹಾಕುತ್ತಿದ್ದಾರೆ. ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಕುಣಿಗಲ್, ಪಾವಗಡ, ತುಮಕೂರು ನಗರ, ಶಿರಾ ತಾಲೂಕುಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ದೂರುಗಳು ದಾಖಲಾಗಿವೆ. ಮುಖ್ಯವಾಗಿ ಬೆಂಗಳೂರಿಗೆ ಹೊಂದಿಕೊಂಡಂತಿರುವ ಕುಣಿಗಲ್ ತಾಲೂಕು ಹಾಗೂ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಶಿರಾ ಹಾಗೂ ಪಾವಗಡ ತಾಲೂಕುಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯ ಗಡಿಭಾಗದಲ್ಲಿ ಕಳ್ಳತನ ಮಾಡುವ ಖದೀಮರು ಸುಲಭವಾಗಿ ದೂರದ ಪ್ರದೇಶಗಳಿಗೆ ಪರಾರಿಯಾಗುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಮೂವರು ಮನೆಗಳ್ಳರ ಬಂಧಿಸಿದ ಮೈಸೂರು ಪೊಲೀಸರು:ಹಗಲು ಹೊತ್ತು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ರಾತ್ರಿ ವೇಳೆ ಅದೇ ಮನೆಗಳಿಗೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಮನೆಗಳ್ಳರನ್ನು ಮೈಸೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾದವರಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ಪಿ ಸೀಮಾ ಲಾಟ್ಕರ್ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಮೈಸೂರು ಜಿಲ್ಲೆಯ ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲೇ ಐದು, ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ಸೇರಿದಂತೆ, ಮೈಸೂರು ಜಿಲ್ಲೆಯಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾದ ಮೂವರು ಖದೀಮರನ್ನು ಅರಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮಾರಾಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ: ಪ್ರಮುಖ ಆರೋಪಿ ಬಂಧನ