ತುಮಕೂರು :ಓರ್ವಸಮಾಜ ಕಲ್ಯಾಣ ಅಧಿಕಾರಿ,ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ನಿರಾಶ್ರಿತ ಕೇಂದ್ರದ ಸಿಬ್ಬಂದಿ ಮೇಲೆ ದಾಳಿ ವಿದೇಶಿ ಪ್ರಜೆಗಳು ದಾಳಿ ನಡೆಸಿರುವ ಘಟನೆ ನಗರದ ದಿಬ್ಬೂರಿನಲ್ಲಿರುವ ವಿದೇಶಿ ಪ್ರಜೆಗಳ ನಿರಾಶ್ರಿತ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ. ಪಿಎಸ್ಐ ಚಂದ್ರಕಲಾ, ಡಬ್ಲ್ಯೂ ಪಿಸಿ ತಾಸೀನಾ ಬಾನು ಹಾಗೂ ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬುವರ ಮೇಲೆ ವಿದೇಶಿ ಪ್ರಜೆಗಳು ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ದಿಬ್ಬೂರಿನಲ್ಲಿರುವ ವಿದೇಶಿ ಪ್ರಜೆಗಳ ನಿರಾಶ್ರಿತ ಕೇಂದ್ರಕ್ಕೆ ಶುಕ್ರವಾರ ಸಂಜೆ 4.30ರ ಸುಮಾರಿಗೆ ನಿರಾಶ್ರಿತ ಕೇಂದ್ರ ಸಿಬ್ಬಂದಿ ಗ್ಯಾಸ್ ಸಿಲಿಂಡರ್ ನೀಡಲು ಹೋದಾಗ ನಾಲ್ವರು ವಿದೇಶಿ ಮಹಿಳೆಯರು ಕೊಠಡಿಯಲ್ಲಿ ಕೂಡಿ ಹಾಕಿ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಚಾಕು ಹಿಡಿದು ಕೊಲೆಗೆ ಯತ್ನ ನಡೆಸಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಪಾಸ್ ಪೋರ್ಟ್ ಅವಧಿ ಮುಗಿದ ವಿದೇಶಿಗರನ್ನು ಇರಿಸಲಾಗಿದ್ದು, ಒಟ್ಟು 27 ಜನರಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಎರಡು ತಿಂಗಳ ಹಿಂದೆ ತುಮಕೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರ ಪ್ರಾರಂಭವಾಗಿದೆ. ಈ ಕೇಂದ್ರದಲ್ಲಿ ಒಟ್ಟು 27 ವಿದೇಶಿ ಪ್ರಜೆಗಳಿದ್ದಾರೆ. ಬೇರೆ ಬೇರೆ ಕಾರಣಗಳಿಂದ ಹಾಗೂ ವೀಸಾ ಮುಗಿದ ಹಿನ್ನೆಲೆ ವಿದೇಶಿಗರನ್ನು ಇಲ್ಲಿ ತಂದು ಇರಿಸಲಾಗಿದೆ ಎಂದರು.