ತುಮಕೂರು:ಕೋವಿಡ್-19 ಸೋಂಕು ದೃಢಪಟ್ಟು ಹೋಂ ಕ್ವಾರಂಟೈನ್ನಲ್ಲಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಸಮನ್ವಯ ಸಾಧಿಸುವ ಮೂಲಕ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸಮರ್ಪಕ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಿದರು.
ಮಾರ್ಗಸೂಚಿಗಳ ಅನ್ವಯ ಆಕ್ಸಿಜನ್ ಮತ್ತು ರೆಮ್ಡಿಸಿಯರ್ ನೀಡಬೇಕು. ಸೋಂಕಿತರನ್ನು ಹೊರತುಪಡಿಸಿ ಉಳಿದವರನ್ನು (ಮನೆಯವರನ್ನೂ ಸೇರಿದಂತೆ) ಕೋವಿಡ್ ಕೇರ್ ಸೆಂಟರ್ ಪ್ರವೇಶಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಜಿ.ಎಸ್. ಬಸವರಾಜು ತಾಲೂಕುವಾರು ಕೋವಿಡ್ ನಿಯಂತ್ರಣಾ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲನೆ ನಡೆಸಿದರು.
ಆಕ್ಸಿಜನ್ ಮತ್ತು ರೆಮಡಿಸಿಯರ್ ಪೂರೈಕೆಯ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆದು, ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಹೇಳಿದರು. ಪೊಲೀಸರ ಸಹಕಾರ ಪಡೆದು ಕೊರೊನಾ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದರು. ಗುಬ್ಬಿ ತಾಲೂಕಿನ ಕೆಲವು ಕಡೆ ಜಾತ್ರೆ ಮಾಡಿದರೂ ಕ್ರಮ ಕೈಗೊಂಡಿಲ್ಲ. ಕಡ್ಡಾಯವಾಗಿ ಜಾತ್ರೆ ನಿಷೇಧ ಮಾಡದಿದ್ದರೆ ತಹಶೀಲ್ದಾರ್ಗಳನ್ನೇ ನೇರ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿತ್ರದುರ್ಗ ಲೋಕಸಭಾ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಹೊಂ ಕ್ವಾರಂಟೈನ್ನಲ್ಲಿರುವ ಸೋಂಕಿತರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೋಂ ಕ್ವಾರಂಟೈನ್ನಲ್ಲಿರುವ ಸೋಂಕಿತರ ಮನೆಯವರೆಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಬೇಕು. ಸೋಂಕಿತನಿರುವ ಸುತ್ತಮುತ್ತ ನಾಲ್ಕೈದು ಪ್ರಕರಣಗಳು ಕಂಡುಬಂದರೆ ತಕ್ಷಣವೇ ಆ ಬೀದಿಯಲ್ಲಿರುವವರೆಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಬೇಕು. ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಹೆಚ್ಚು ನಿಗಾವಹಿಸಬೇಕು. ಹೋಂ ಕ್ವಾರಂಟೈನ್ ಸೋಂಕಿತರು ಎಲ್ಲೆಂದರಲ್ಲಿ ತಿರುಗಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.
ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಆಕ್ಸಿಜನ್ ಮತ್ತು ರೆಮ್ಡಿಸಿಯರ್ ಸಮಸ್ಯೆಯಿಲ್ಲ. ಆದರೆ, ತಾಲೂಕಿಗೆ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಹೋಂ ಕ್ವಾರಂಟೈನ್ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಲಾಗುತ್ತಿದೆ. ಹೆಚ್ಚು ಸೋಂಕಿನ ಪ್ರಕರಣಗಳಿರುವ ಪ್ರದೇಶಗಳನ್ನು ಹಾಟ್ಸ್ಪಾಟ್ಗಳೆಂದು ಗುರುತಿಸಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್, ರೆಮ್ಡಿಸಿಯರ್ ಕೊರತೆಯಾಗದಂತೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.