ತುಮಕೂರು: ಕೋವಿಡ್ ಎರಡನೇ ಅಲೆ ಪರಿಣಾಮ ಚಿತ್ರಮಂದಿರಗಳು ಬಂದ್ ಆಗಿದ್ದು, ಚಿತ್ರಮಂದಿರಗಳ ಮಾಲೀಕರು ಮತ್ತು ಕೆಲಸ ಮಾಡುವ ಕಾರ್ಮಿಕರಿಗೆ ದಿಕ್ಕೇ ತೋಚದಂತಾಗಿದೆ.
ಕೋವಿಡ್ ಮೊದಲ ಅಲೆ ಕೊಂಚ ಇಳಿಮುಖವಾದಾಗ ಜನವರಿ ನಂತರ ಬಾಗಿಲು ತೆಗೆದಿದ್ದ ತುಮಕೂರಿನ ಚಿತ್ರಮಂದಿರಗಳು ಇನ್ನೇನು ಚೇತರಿಕೆ ಕಾಣಬೇಕು ಎನ್ನುವಷ್ಟರಲ್ಲಿ ಕೋವಿಡ್ ಎರಡನೇ ಅಲೆ ಶಾಕ್ ನೀಡಿದೆ. ಕೊರೊನಾ ಹಿನ್ನೆಲೆ ಜನತಾ ಕರ್ಫ್ಯೂ ಜಾರಿಯಾಗಿದೆ. ಇದು ಚಿತ್ರಮಂದಿರದ ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನೊಂದೆಡೆ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಹ ಸಂಕಷ್ಟಕ್ಕೀಡಾಗಿದ್ದಾರೆ. ತುಮಕೂರಿನ ಚಿತ್ರಮಂದಿರಗಳಲ್ಲಿ ತಿಂಗಳಿಗೆ ಕನಿಷ್ಠ 6ರಿಂದ 7ಲಕ್ಷ ರೂ. ನಷ್ಟವಾಗುತ್ತಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳನ್ನು ಈ ವರ್ಷ ಜನವರಿ 25ಕ್ಕೆ ತೆರೆಯಲಾಗಿತ್ತು. ಬರೋಬ್ಬರಿ 10 ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಬಳಿಕ 2 ತಿಂಗಳು 20 ದಿನಗಳು ಮಾತ್ರ ಚಿತ್ರಮಂದಿರಗಳು ತೆರೆಯಲ್ಪಟ್ಟಿದ್ದವು. ಆದ್ರೆ ಇದೀಗ ಜನತಾ ಕರ್ಫ್ಯೂ ಜಾರಿಯಾಗಿದ್ದು, ಪುನಃ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಮಾಲೀಕರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು, ಕಾರ್ಮಿಕರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.