ಕರ್ನಾಟಕ

karnataka

ETV Bharat / state

ಪ್ರಯಾಣಿಕರ ಸಂಖ್ಯೆ ಇಳಿಮುಖ: ತುಮಕೂರು ರೈಲ್ವೆ ನಿಲ್ದಾಣದ ಕ್ಯಾಂಟೀನ್​ಗಳಲ್ಲಿ ವ್ಯಾಪಾರ ಕುಂಠಿತ! - tumkur hyc

ಕೋವಿಡ್​ ಭೀತಿ ಮತ್ತು ಲಾಕ್​ಡೌನ್​ ಹಿನ್ನೆಲೆ ರೈಲು ಪ್ರಯಾಣಿಕರ ಸಂಖ್ಯೆ ತೀರಾ ಇಳಿಮುಖವಾಗಿದೆ. ಬರುವ ಬೆರಳೆಣಿಕೆಯಷ್ಟು ಮಂದಿ ಸಹ ರೈಲ್ವೆ ನಿಲ್ದಾಣದಲ್ಲಿನ ಕ್ಯಾಂಟೀನ್​​ಗಳಿಗೆ ಹೋಗಿ ತಿಂಡಿ-ತಿನಿಸು ಕೊಳ್ಳುವುದಿಲ್ಲ. ಪರಿಣಾಮ ಕ್ಯಾಂಟೀನ್ ವ್ಯಾಪಾರ-ವಹಿವಾಟು ಅಕ್ಷರಶಃ ಬಂದ್ ಆಗಿ ಕ್ಯಾಂಟೀನ್ ಗುತ್ತಿಗೆದಾರರು, ಕಾರ್ಮಿಕರು ಸಂಕಷ್ಟಕಕ್ಕೆ ಒಳಗಾಗಿದ್ದಾರೆ.

covid effects on canteen of tumkur railway station
ತುಮಕೂರು ರೈಲ್ವೆ ಕ್ಯಾಂಟೀನ್​ಗಳ ಮೇಲೆ ಕೋವಿಡ್​ ಎಫೆಕ್ಟ್​

By

Published : May 30, 2021, 8:21 AM IST

ತುಮಕೂರು: ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್​ನಲ್ಲಿ ಸೋಂಕು ಹರಡುವಿಕೆ ಭೀತಿಯಿಂದ ವ್ಯಾಪಾರ ಬಹುಪಾಲು ಕ್ಷೀಣಿಸಿತ್ತು. ಇದೀಗ ಎರಡನೇ ಅಲೆ ವೇಳೆ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಪರಿಣಾಮ ಹೆಚ್ಚಿನ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ರೈಲ್ವೆ ನಿಲ್ದಾಣದಲ್ಲಿ ಕ್ಯಾಂಟೀನ್ ವ್ಯಾಪಾರ-ವಹಿವಾಟು ಅಕ್ಷರಶಃ ಬಂದ್ ಆಗಿದೆ.

ರೈಲ್ವೆ ನಿಲ್ದಾಣದ ಕ್ಯಾಂಟೀನ್​ಗಳ ಮೇಲೆ ಕೋವಿಡ್​ ಎಫೆಕ್ಟ್​

ಕ್ಯಾಂಟೀನ್​​ಗಳಲ್ಲಿ ತಯಾರಿಸುವ ಇಡ್ಲಿ, ವಡೆ, ದೋಸೆ, ಪಲಾವ್ ಮತ್ತಿತರ ಆಹಾರ ಪದಾರ್ಥಗಳನ್ನು ಖರೀದಿಸುವವರಿಲ್ಲದೆ ವ್ಯಾಪಾರ ಕುಂಠಿತಗೊಂಡಿದೆ. ಸಾಮಾನ್ಯವಾಗಿ ರೈಲುಗಳು ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಪ್ರಯಾಣಿಕರು ಕ್ಯಾಂಟೀನ್​ಗಳಿಗೆ ಮುಗಿಬಿದ್ದು ತಿಂಡಿ ಖರೀದಿಸುತ್ತಿದ್ದರು. ಆದ್ರೀಗ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೇ ಇಳಿಮುಖವಾಗಿದೆ. ಒಂದು ರೈಲು ನಿಲ್ದಾಣಕ್ಕೆ ಬಂದು ನಿಂತರೆ ನೂರಾರು ಮಂದಿ ಪ್ರಯಾಣಿಕರು ಕ್ಯಾಂಟೀನ್​​ಗಳಿಗೆ ಬಂದು ತಿಂಡಿ ಖರೀದಿಸಿ ರೈಲು ಹತ್ತುತ್ತಿದ್ದರು. ಆದ್ರೆ ಇದೀಗ ನಿಲ್ದಾಣಕ್ಕೆ ಬರುವ ಬೆರಳೆಣಿಕೆಯಷ್ಟು ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಬೆರಳೆಣಿಕೆಯಷ್ಟಿದೆ.

ರೈಲು ನಿಲ್ದಾಣಕ್ಕೆ ಬಂದು ನಿಂತರೆ ಕನಿಷ್ಠ 15ರಿಂದ 20 ಮಂದಿ ಮಾತ್ರ ಪ್ರಯಾಣಿಕರು ರೈಲಿನಿಂದ ಇಳಿಯುತ್ತಾರೆ. ಅಷ್ಟೇ ಸಂಖ್ಯೆಯ ಪ್ರಯಾಣಿಕರು ರೈಲ್ವೆ ನಿಲ್ದಾಣದಿಂದ ರೈಲು ಹತ್ತಿ ಪ್ರಯಾಣಿಸುತ್ತಾರೆ. ಒಂದು ವೇಳೆ ಪ್ರಯಾಣಿಕರು ಕ್ಯಾಂಟೀನ್​​ಗೆ ಬಂದ್ರೆ ಬಿಸಿಬಿಸಿ ಕಾಫಿ ಅಥವಾ ಟೀ ಕುಡಿದು ಹೋಗುತ್ತಾರೆಯೇ ಹೊರತು ತಿಂಡಿ ಖರೀದಿಸುವುದು ತೀರಾ ಕಡಿಮೆ. ಇದ್ರಿಂದಾಗಿ ಮೊದಮೊದಲು ತಯಾರಿಸುತ್ತಿದ್ದ ಆಹಾರ ಪದಾರ್ಥಗಳನ್ನು ಎಸೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡು ಆಹಾರ ಪದಾರ್ಥ ತಯಾರಿಸುವ ಪ್ರಮಾಣವನ್ನೇ ಕಡಿಮೆ ಮಾಡಲಾಗಿದೆ ಎಂದು ರೈಲ್ವೆ ಕ್ಯಾಂಟೀನ್ ನಿರ್ವಾಹಕ ರಾಜು ತಿಳಿಸಿದ್ದಾರೆ.

ಇನ್ನು ರೈಲುಗಳಲ್ಲಿ ದೂರದ ಊರಿಗೆ ಪ್ರಯಾಣಿಸುವವರು ತಮ್ಮ ಮನೆಗಳಲ್ಲಿಯೇ ಆಹಾರವನ್ನು ತಯಾರಿಸಿಕೊಂಡು ಬರುತ್ತಾರೆ. ಸೋಂಕು ಭೀತಿಯಿಂದ ನಿಲ್ದಾಣಗಳಲ್ಲಿ ಖರೀದಿಸುವ ಗೋಜಿಗೆ ಹೋಗುತ್ತಿಲ್ಲ. ಇದ್ರಿಂದಾಗಿ ರೈಲ್ವೆ ಕ್ಯಾಂಟೀನ್ ಗುತ್ತಿಗೆದಾರರು ವಹಿವಾಟು ಇಲ್ಲದೇ ಕಂಗಾಲಾಗಿದ್ದಾರೆ. ಈ ಪರಿಸ್ಥಿತಿ ಕೊರೊನಾ ಬಂದಾಗಿನಿಂದಲೂ ಇದ್ದು, ಇದೀಗ ಮತ್ತಷ್ಟು ಸಂಕಷ್ಟ ಮುಂದುವರೆದಿದೆ ಎಂದು ಕ್ಯಾಟೀನ್​ ಕಾರ್ಮಿಕ ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಡ್ ಬ್ಲಾಕಿಂಗ್, ರೆಮ್​​ಡಿಸಿವಿರ್ ಅಕ್ರಮ ಮಾರಾಟ ತಡೆಯಲು ದಾವಣಗೆರೆ ಜಿಲ್ಲಾಡಳಿತ ಕ್ರಮ

ಕ್ಯಾಂಟೀನ್​ಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಸಂಕಷ್ಟದಲ್ಲಿದ್ದಾರೆ. ಗುತ್ತಿಗೆದಾರರು ವಹಿವಾಟು ಇಲ್ಲದೇ ಅಪಾರ ನಷ್ಟ ಅನುಭವಿಸುತ್ತಿದ್ದು, ಕೆಲಸಗಾರರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲ ಕಾರ್ಮಿಕರಂತೂ ಸಂಬಳವಿಲ್ಲದೆ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ABOUT THE AUTHOR

...view details