ತುಮಕೂರು: ಕೊರೊನಾ 2ನೇ ಅಲೆಯ ಭೀಕರತೆ ಬಳಿಕ 3ನೇ ಅಲೆಯನ್ನು ಎದುರಿಸಲು ತುಮಕೂರು ಜಿಲ್ಲಾಡಳಿತ ಸನ್ನದ್ಧಗೊಂಡಿದೆ. 3ನೇ ಅಲೆ ಪ್ರಮುಖವಾಗಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದ ಸಾಧ್ಯತೆಗಳ ಕಾರಣದಿಂದ ಜಿಲ್ಲಾಡಳಿತ ಮಕ್ಕಳ ಗಣತಿ ಮಾಡಿದೆ. ಕೊರೊನಾ 2ನೇ ಅಲೆಗೆ ಜಿಲ್ಲೆಯಲ್ಲಿ ಸರಿ ಸುಮಾರು 700 ಜನ ಮೃತಪಟ್ಟಿದ್ದಾರೆ. ಹೀಗಾಗಿ 3ನೇ ಅಲೆ ಎದುರಿಸಲು ತುಮಕೂರು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಜ್ಞರ ಪ್ರಕಾರ ಮೂರನೇ ಅಲೆ 1 ರಿಂದ 16 ವರ್ಷದೊಳಗಿನ ಮಕ್ಕಳ ಪರಿಣಾಮ ಬೀರಲಿದೆ ಎನ್ನಲಾಗಿದ್ದರಿಂದ, ಜಿಲ್ಲಾಡಳಿತವು 6 ವರ್ಷದೊಳಗಿನ 1.41 ಲಕ್ಷ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಟ್ಟಿದೆ. ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 8,136 ಮಕ್ಕಳ ಮೇಲೆ ತೀವ್ರ ನಿಗಾ ಇಡಲಾಗಿದೆ.
ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ:
ಅಪೌಷ್ಟಿಕತೆಯುಳ್ಳ 8,136 ಮಕ್ಕಳಿಗೆ ಮನೆಗೆ ತೆರಳಿ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. ಅಂಗನವಾಡಿ-ಆಶಾ ಕಾರ್ಯಕರ್ತೆಯರು 1-6 ವರ್ಷದ ಮಕ್ಕಳ ಮನೆಗೆ ಹೋಗಿ ಪೋಷಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸುತ್ತಿದ್ದಾರೆ.
ಕೋವಿಡ್ ಲಕ್ಷಣಗಳು ಕಂಡು ಬಂದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗಮನಕ್ಕೆ ತಂದು ತಕ್ಷಣ ಕ್ರಮಕೈಗೊಳ್ಳಲು ಸಿದ್ದತೆ ಮಾಡಲಾಗಿದೆ. ಜತೆಗೆ ಮಕ್ಕಳ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ತೆರೆದು ಅಲ್ಲಿಯೇ ಚಿಕಿತ್ಸೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ.
ಚಿಕಿತ್ಸೆಗೆ ಸಿದ್ದತೆ:
ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಪುನಃ ಉಲ್ಬಣಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ತುಮಕೂರು ಜಿಲ್ಲೆಯಾದ್ಯಂತ 32 ಆಸ್ಪತ್ರೆಗಳನ್ನು ಮೂರನೇ ಅಲೆ ಚಿಕಿತ್ಸೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಎರಡು ಮೆಡಿಕಲ್ ಕಾಲೇಜು, 9 ತಾಲೂಕು ಆಸ್ಪತ್ರೆ, 1 ಜಿಲ್ಲಾಸ್ಪತ್ರೆ ಸೇರಿ 580 ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲಿಡಲಾಗಿದೆ. ಜತೆಗೆ ಮಕ್ಕಳ ಔಷಧ ಸ್ಟಾಕ್ ಇಡಲಾಗುತ್ತಿದೆ.