ತುಮಕೂರು:ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ವೇಳೆ ಶಾಲಾ ಮಕ್ಕಳಿಗೆ ನಕಲಿ ವಿಮೆ ಪಾಲಿಸಿ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಶಾಸಕ ಗೌರಿಶಂಕರ್ ಅವರಿಗೆ ಖುದ್ದು ಹಾಜರಾಗುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ ನ್ಯಾಯಾಲಯಕ್ಕೆ ಅಕ್ಟೋಬರ್ 22ರಂದು ಹಾಜರಾಗುವಂತೆ ಸೂಚನೆ ನೀಡಿದೆ.
ಮಾಜಿ ಶಾಸಕ ಸುರೇಶಗೌಡ ಅವರ ಸಹೋದರ ರಮೇಶ್ ಎಂಬುವರು ಈ ಕುರಿತಂತೆ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದರು. 2018 ನಡೆದಿದ್ದ ವಿಧಾನಸಭೆ ಉಪಚುನಾವಣೆ ವೇಳೆ, ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ ಸಿ ಗೌರಿಶಂಕರ್ ಕ್ಷೇತ್ರದಲ್ಲಿನ 50 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಂದಾಜು 40,000 ರೂ. ಮೌಲ್ಯದ ನಕಲಿ ವಿಮೆಯ ಬಾಂಡ್ಗಳನ್ನು ನೀಡಿದ್ದರು. ಅದರಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ಸಮೂಹ ವಿಮೆಯ ಪಾಲಿಸಿ ವಿತರಣೆ ಮಾಡಿದ್ದರು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.