ತುಮಕೂರು: ನಿತ್ಯ ತುಮಕೂರು ಮತ್ತು ಬೆಂಗಳೂರು ನಡುವೆ ಓಡಾಡುವವರಿಂದಲೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವ ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ತುಮಕೂರಿಗೆ ಬರುವ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್: ಸಚಿವ ಮಾಧುಸ್ವಾಮಿ
ತುಮಕೂರಿನಲ್ಲಿ ಕೊರೊನಾ ಹೆಚ್ಚಾಗಲು ಬೆಂಗಳೂರಿನಿಂದ ಬರುವ ಪ್ರಯಾಣಿಕರು ಕಾರಣ. ಇನ್ಮುಂದೆ ಬೆಂಗಳೂರಿನಿಂದ ತುಮಕೂರಿಗೆ ಬರುವ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತಕ್ಕೆ ಕೊರೊನಾ ನಿಯಂತ್ರಣ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ತುಮಕೂರಿಗೆ ಬರುವವರ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ. ಬೆಂಗಳೂರಿಗೆ ನಗರದಿಂದ ಕೆಲಸ ಅರಸಿ ಸುಮಾರು 50 ಸಾವಿರ ಮಂದಿ ತೆರಳುತ್ತಾರೆ. ಹೀಗಾಗಿ ಬೆಂಗಳೂರಿಗೆ ಹೋಗಿ ಬರುವರ ಮೂಲಕವೇ ತುಮಕೂರು ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ ಎಂದರು.
ಸೋಮವಾರದಿಂದ ನಗರಕ್ಕೆ ಬರುವವರಿಗೆ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲು ಚಿಂತನೆ ನಡೆಸಲಾಗುತ್ತಿದೆ. ಲಾಕ್ಡೌನ್ ಹಿನ್ನೆಲೆ ಬೆಂಗಳೂರಿನಲ್ಲಿರಲು ಸಾಧ್ಯವಾಗದೇ ತಮ್ಮ ಊರುಗಳಿಗೆ ತೆರಳುವವರಿಗೆ ಆನುಕೂಲವಾಗಲೆಂದು ನಿಯಮಾವಳಿಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಸೋಮವಾರದ ನಂತರ ಬಸ್ಗಳಲ್ಲಿ ಬೆಂಗಳೂರಿನಿಂದ ತುಮಕೂರು ನಗರಕ್ಕೆ ಬರುವ ಜನಕ್ಕೆ ಱಪಿಡ್ ಟೆಸ್ಟ್ಗೆ ಒಳಪಡಿಸಲಾಗುವುದು. ನಗರ ಪ್ರವೇಶಿಸುವ ಬಸ್ಗಳನ್ನು ಒಂದೇ ಸ್ಥಳದಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಸೋಂಕು ಪತ್ತೆಯಾದರೆ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು ಎಂದು ಸಚಿವರು ಹೇಳಿದರು.