ತುಮಕೂರು:ಕೊರೊನಾ ಭಯಕ್ಕೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಗ್ರಾಮಸ್ಥರು ಗ್ರಾಮವನ್ನೇ ತೊರೆದು ಮೌಢ್ಯಾಚರಣೆ ಮುಂದಾಗಿದ್ದಾಗ ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜ್ ಜನರಲ್ಲಿ ಜಾಗೃತಿ ಮೂಡಿಸಿ ವಾಪಸ್ ಗ್ರಾಮಕ್ಕೆ ಕಳುಹಿಸಿದ್ದಾರೆ.
ಮಾರಮ್ಮನ ಮಾತು ನಂಬಿ ಊರು ಬಿಟ್ಟ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ ತಹಶೀಲ್ದಾರ್
ಲಾಕ್ಡೌನ್ ನಡುವೆಯೂ ಮೌಢ್ಯಾಚರಣೆಗೆ ಒಳಗಾಗಿ ಗ್ರಾಮವನ್ನೇ ತೊರೆದು ಹೋಗಿದ್ದ ಮುದ್ದೇನಹಳ್ಳಿ ಗ್ರಾಮಸ್ಥರಿಗೆ ತಹಶೀಲ್ದಾರ್ ಜಾಗೃತಿ ಮೂಡಿಸಿ ವಾಪಸ್ ಗ್ರಾಮಕ್ಕೆ ಕಳುಹಿಸಿದ್ದಾರೆ.
ಮುದ್ದೇನಹಳ್ಳಿಯಲ್ಲಿ ಜನರು ಆರಾಧಿಸುವ ಮಾರಮ್ಮ ದೇವಿಯು ಗ್ರಾಮದ ಮಹಿಳೆಯೊಬ್ಬರ ಮೈ ಮೇಲೆ ಬಂದು, ಎಲ್ಲರೂ ಎರಡು ರಾತ್ರಿ ಗ್ರಾಮವನ್ನು ತೊರೆಯಬೇಕು ಎಂದು ಭವಿಷ್ಯ ನುಡಿದಿದ್ದಳಂತೆ. ಹೀಗಾಗಿ ಊರಾಚೆಯ ಜಮೀನುಗಳಲ್ಲಿ ಗುಡಿಸಲು ಹಾಕಿ ಜನರು ವಾಸ ಮಾಡುತ್ತಿದ್ದರು. ಅವರಲ್ಲಿ ಗ್ರಾಮದ ಹಿರಿಯರು, ಮಕ್ಕಳು, ಮಹಿಳೆಯರು, ಕುರಿ ಕೋಳಿ ಎಲ್ಲವೂ ಊರಾಚೆಗೆ ಶಿಫ್ಟ್ ಆಗಿತ್ತು. ಅಲ್ಲದೆ ಗ್ರಾಮದ ಪ್ರವೇಶದ್ವಾರಕ್ಕೆ ಮುಳ್ಳು ಬೇಲಿ ಹಾಕಿ 55 ಕುಟುಂಬಗಳು ಊರು ಖಾಲಿ ಮಾಡಿದ್ದವು.
ಈ ಮೂಲಕ ಕೊರೊನಾ ಲಾಕ್ ಡೌನ್ ನಡುವೆಯೇ ಮೌಢ್ಯಾಚರಣೆಗೆ ಗ್ರಾಮಸ್ಥರು ಮಾರುಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಹೋದ ತಹಶೀಲ್ದಾರ್ ಗೋವಿಂದರಾಜು, ಗ್ರಾಮಸ್ಥರಿಗೆ ಮನವರಿಕೆ ಮಾಡಿ ಮೌಢ್ಯಾಚರಣೆ ಬ್ರೇಕ್ ಹಾಕಿದ್ರು. ಅಲ್ಲದೆ ಲಾಕ್ ಡೌನ್ ವೇಳೆ ಗ್ರಾಮಸ್ಥರಿಗೆ ಅಗತ್ಯ ನೆರವು ನೀಡಲು ಮುಂದಾದ ನಿರ್ಧಾರ ಮಾಡಲಾಯಿತು.