ತುಮಕೂರು: ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಿರಂತರವಾಗಿ ವೃದ್ಧಾಶ್ರಮಗಳ ಮೇಲೆ ನಿಗಾ ವಹಿಸಲಾಗುತ್ತಿದೆ.
ಕೊರೊನಾ ಭೀತಿ: ತುಮಕೂರಿನಲ್ಲಿ ವೃದ್ಧಾಶ್ರಮಗಳ ಮೇಲೆ ನಿಗಾ - ತುಮಕೂರಿನಲ್ಲಿ ವೃದ್ಧಾಶ್ರಮಗಳ ಮೇಲೆ ನಿಗಾ
ತುಮಕೂರಿನಲ್ಲಿ 4 ವೃದ್ಧಾಶ್ರಮಗಳು ಸರ್ಕಾರದಿಂದ ಅನುದಾನ ಪಡೆಯುತ್ತಿವೆ. 25 ಮಂದಿ ಬಡತನ ರೇಖೆಗಿಂತ ಕೆಳಗಿರುವ ನಿರ್ಗತಿಕರಿಗೆ ಉಚಿತವಾಗಿ ಊಟ ತಿಂಡಿ ವಸತಿ ಆರೋಗ್ಯ ಸೇವೆ ನೀಡಲಾಗುತ್ತಿದೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 6 ವೃದ್ದಾಶ್ರಮಗಳಿವೆ. 2007ರ ಪಾಲಕರ ಪೋಷಣೆ ಸಂರಕ್ಷಣಾ ಕಾಯ್ದೆ ಪ್ರಕಾರ ವೃದ್ಧಾಶ್ರಮಗಳನ್ನು ಆರಂಭಿಸಲು ಅವಕಾಶವಿದೆ. ವೃದ್ಧಾಶ್ರಮಗಳನ್ನು ನಡೆಸುವ ಮುನ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯಲ್ಲಿ ಅನುಮೋದನೆ ಪಡೆಯಬೇಕಿದೆ. 20 ಜನರನ್ನು ಕೇಂದ್ರದಲ್ಲಿ ನೋಡಿಕೊಳ್ಳಬಹುದಾಗಿದೆ. ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಿ ವೃದ್ಧರ ಆರೋಗ್ಯ ಸಮಸ್ಯೆ ನಿವಾರಿಸಿ ಕಾಳಜಿ ವಹಿಸಬೇಕಿದೆ. ಮುಖ್ಯವಾಗಿ ವಯೋವೃದ್ಧರು ಹೆಚ್ಚಾಗಿ ಉಸಿರಾಟದ ತೊಂದರೆ, ಅಸ್ತಮಾ, ಮಂಡಿ ಮೊಣಕೈ ಕಾಲು ನೋವಿನಿಂದ ಬಳಲುತ್ತಾರೆ. ಹೀಗಾಗಿ ಅಂಥವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ವೈದ್ಯಕೀಯ ಚಿಕಿತ್ಸೆ ನೀಡಬೇಕಿದೆ ಎಂದು ಶಾರದಾಂಬ ಟ್ರಸ್ಟ್ ಮುಖ್ಯಸ್ಥೆ ಯಶೋದಮ್ಮ ತಿಳಿಸಿದ್ದಾರೆ.
ಪ್ರತಿ ವೃದ್ಧಾಶ್ರಮಕ್ಕೆ ವರ್ಷಕ್ಕೆ 8 ಲಕ್ಷ ಸಹಾಯಧನ: ತುಮಕೂರು ಜಿಲ್ಲೆಯಲ್ಲಿ ನಾಲ್ಕು ವೃದ್ಧಾಶ್ರಮಗಳು ಸರ್ಕಾರದ ವತಿಯಿಂದ ಅನುದಾನ ಪಡೆಯುತ್ತಿವೆ. 25 ಮಂದಿ ಬಡತನ ರೇಖೆಗಿಂತ ಕೆಳಗಿರುವ ನಿರ್ಗತಿಕರಿಗೆ ಉಚಿತವಾಗಿ ಊಟ ತಿಂಡಿ ವಸತಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ನಿಯಮಾವಳಿ ಪ್ರಕಾರ ನಿತ್ಯದ 24 ಗಂಟೆಯೂ ಅವರನ್ನು ನೋಡಿಕೊಳ್ಳಬೇಕಿದೆ. ಇನ್ನು ಜಿಲ್ಲೆಯಲ್ಲಿ 3 ವೃದ್ಧಾಶ್ರಮಗಳನ್ನು ಸರ್ಕಾರದಿಂದ ಯಾವುದೇ ಅನುದಾನವಿಲ್ಲದೇ ನಡೆಸಲಾಗುತ್ತಿದೆ. ಅಲ್ಲದೇ ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ. ಈಗಾಗಲೇ ಅನುಮತಿ ಪಡುವಂತೆ ಸರ್ಕಾರದ ನಿಯಮಾವಳಿಯನ್ನು ಪಾಲಿಸುವಂತೆ ಸೂಚಿಸಲಾಗಿದೆ.
ನಿಯಮ ಪಾಲಿಸದಿದ್ದರೆ ಅನುಮತಿ ಸ್ಥಗಿತ: ವೃದ್ಧಾಶ್ರಮಗಳಲ್ಲಿ ವೃದ್ಧರನ್ನು ಸರ್ಕಾರದ ನಿಯಮಾವಳಿಗಳಂತೆ ಪಾಲನೆ ಮಾಡದೇ ಇರುವುದು ಕಂಡು ಬಂದರೆ ಅನುಮತಿಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಅಲ್ಲಿರುವ ವೃದ್ಧರನ್ನು ಬೇರೆ ವೃದ್ಧಾಶ್ರಮಗಳಿಗೆ ಕಳುಹಿಸಿ ಕೊಡಲಾಗುತ್ತದೆ. 3 ವರ್ಷದಿಂದ ಇದುವರೆಗೂ ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳಲ್ಲಿ ಯಾವುದೇ ರೀತಿಯ ವ್ಯತ್ಯಯಗಳು ಕಂಡು ಬಂದಿಲ್ಲ. ಪ್ರತಿ ತಿಂಗಳೂ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದ್ದು, ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣ ಅಧಿಕಾರಿ ರಮೇಶ್ ತಿಳಿಸಿದ್ದಾರೆ.